ವಿದ್ಯಾರ್ಥಿನಿಯರಿಗೆ ಸೀರೆ, ರವಿಕೆ, ಸಲ್ವಾರ್ ಕಮೀಜ್
ವಿವಾದ ಸೃಷ್ಟಿಸಿದ ರಾಜಸ್ಥಾನ ಕಾಲೇಜು ಶಿಕ್ಷಣ ನಿರ್ದೇಶನಾಲಯದ ಆದೇಶ
ಜೈಪುರ, ಮಾ. 8: ರಾಜ್ಯಾದ್ಯಂತ ಸರಕಾರ ನಡೆಸುತ್ತಿರುವ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಅನುಸರಿಸಬೇಕೆಂಬ ರಾಜಸ್ತಾನ ಕಾಲೇಜು ಶಿಕ್ಷಣ ನಿರ್ದೇಶನಾಲಯದ ಇತ್ತೀಚಿನ ಮಾರ್ಗಸೂಚಿಗೆ ಸಮಾಜದ ಒಂದು ವರ್ಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಮಾರ್ಗಸೂಚಿ ‘ಆಘಾತಕಾರಿ ಹಾಗೂ ಅತಿರೇಕದ್ದು’ ಎಂದು ಅದು ಹೇಳಿದೆ ಹಾಗೂ ಆದೇಶವನ್ನು ಕೂಡಲೇ ಹಿಂದೆಗೆಯುವಂತೆ ಆಗ್ರಹಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಧರಿಸಬೇಕಾದ ಸಮವಸ್ತ್ರದ ಬಗ್ಗೆ ನಿರ್ದೇಶನಾಲಯ ಮಾರ್ಚ್ 4ರಂದು ರಾಜ್ಯದ 219 ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿತ್ತು. ಸುತ್ತೋಲೆ ಪ್ರಕಾರ, ವಿದ್ಯಾರ್ಥಿ ಶರ್ಟ್ ಹಾಗೂ ಪ್ಯಾಂಟ್ ಧರಿಸಬೇಕು ವಿದ್ಯಾರ್ಥಿನಿಯರು ಸಲ್ವಾರ್ ಕಮೀಜ್ ಅಥವಾ ಸೀರೆ ಹಾಗೂ ರವಿಕೆ ಧರಿಸಬೇಕು. ರಾಜಸ್ತಾನದ ಸರಕಾರಿ ಕಾಲೇಜುಗಳಲ್ಲಿ 175,000 ಮಹಿಳೆಯರು ಸೇರಿದಂತೆ 400,000 ವಿದ್ಯಾರ್ಥಿಗಳು ಇದ್ದಾರೆ. ಆದಾಗ್ಯೂ, ನಿರ್ದೇಶನಾಲಯ ಸಮವಸ್ತ್ರದ ಬಣ್ಣದ ಬಗ್ಗೆ ತೀರ್ಮಾನಿಸಲು ಕಾಲೇಜು ಆಡಳಿತಕ್ಕೆ ಬಿಟ್ಟಿದೆ. ಮಾರ್ಚ್ 12ರಂದು ಬಣ್ಣದ ಆಯ್ಕೆ ಬಗ್ಗೆ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವಂತೆ ಕಾಲೇಜುಗಳಿಗೆ ನಿರ್ದೇಶನಾಲಯ ತಿಳಿಸಿದೆ. ಕಾಲೇಜುಗಳಲ್ಲಿ ನಿರ್ದಿಷ್ಟ ಡ್ರೆಸ್ ಕೋಡ್ ಅನುಷ್ಠಾನಿಸುವುದು ಅಸಂವಿಧಾನಿಕ. ಅದು ಹಿಂದುಳಿಯುವಿಕೆ, ಪಿತೃಪ್ರಧಾನತೆ ಹಾಗೂ ಸರ್ವಾಧಿಕಾರದ ಸಂಕೇತ ಎಂದು ಪಿಯುಸಿಎಲ್ ಆರೋಪಿಸಿದೆ.