ಬೆಂಗಳೂರು: ಅತ್ಯಾಚಾರ ಪ್ರಕರಣಗಳ ಇತ್ಯರ್ಥಕ್ಕಾಗಿ ಪ್ರತಿಭಟನೆ
ಬೆಂಗಳೂರು, ಮಾ.8: ನ್ಯಾಯಾಲಯಗಳಲ್ಲಿ ವಿಚಾರಣೆಯಾಗದೆ ಬಾಕಿ ಉಳಿದಿರುವ ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ನ್ಯೂ ಇಂಡಿಯಾ ಚಾರಿಟೆಬಲ್ ಟ್ರಸ್ಟ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಗುರುವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಟ್ರಸ್ಟ್‌ನ ನೂರಾರು ಕಾರ್ಯಕರ್ತರು ಬಾಯಿಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಬಾಕಿ ಇರುವ ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡದೇ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ಶೀಘ್ರವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಟ್ರಸ್ಟ್ ಸಂಸ್ಥಾಪಕ ಜಯ್ ಟಾಟಾ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯದಡಿ ಹಲವು ಪ್ರಕರಣಗಳು ದಾಖಲಾಗುತ್ತಿದ್ದು, ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ.30 ಪ್ರಕರಣಗಳ ವಿಚಾರಣೆ ಆಗುತ್ತಿದ್ದು, ಇನ್ನುಳಿದಂತೆ ಶೇ.90 ಪ್ರಕರಣಗಳು ಮುಚ್ಚಿ ಹೋಗುತ್ತಿವೆ. ಹೀಗಾಗಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ ಎಂದು ದೂರಿದ ಅವರು, ಈ ಬಗ್ಗೆ ಜನರು ಜಾಗೃತರಾಗಿ ಅತ್ಯಾಚಾರ ಪ್ರಕರಣಗಳ ಶೀಘ್ರ ವಿಲೇವಾರಿಗೆ ಒತ್ತಾಯಿಸಬೇಕೆಂದು ತಿಳಿಸಿದರು.





