ಬಿಜೆಪಿ ಹಿಂದುಳಿದ ವರ್ಗದ ಸಮಾವೇಶ ಮುಂದೂಡಿಕೆ: ಅರವಿಂದ ಲಿಂಬಾವಳಿ

ಬೆಂಗಳೂರು, ಮಾ.8: ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಮಾ.13ರಂದು ಕೂಡಲಸಂಗಮದಲ್ಲಿ ನಡೆಯಬೇಕಿದ್ದ ಹಿಂದುಳಿದ ವರ್ಗಗಳ ಸಮಾವೇಶವನ್ನು ಮುಂದೂಡಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಗುರುವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರಮೋದಿ ಇಬ್ಬರನ್ನೂ ಒಂದೇ ವೇದಿಕೆಗೆ ಕರೆತರಲು ಉದ್ದೇಶಿಸಿರುವುದರಿಂದ ಮುಂದೂಡಲಾಗಿದೆ ಎಂದರು.
ನವ ಬೆಂಗಳೂರು ನಿರ್ಮಾಣಕ್ಕೆ ಕಾಲೇಜು ವಿದ್ಯಾರ್ಥಿಗಳ ಮೂಲಕ ಸಲಹೆ ಪಡೆಯಲು ಮಾ.20 ರಿಂದ 23ರವರೆಗೆ ನಗರದ ಕಾನೂನು ಸುವ್ಯವಸ್ಥೆ, ಕೆರೆಗಳ ಸಮಸ್ಯೆ, ಕಸದ ನಿವಾರಣೆ, ನಗರದ ಸುರಕ್ಷತೆ ಸೇರಿದಂತೆ ಎಂಟು ವಿಭಾಗಗಳಲ್ಲಿ ಪ್ರಬಂಧ, ಚರ್ಚಾ ಸ್ಪರ್ಧೆ ನಡೆಯಲಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಂದ ಬರುವ ಹೊಸ ಸಲಹೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲಾಗುವುದು. ಹಲವು ಕಾಲೇಜು ಕ್ಯಾಂಪಸ್‌ನಲ್ಲಿ ಸ್ಪರ್ಧೆ ನಡೆಯಲಿದ್ದು, ಮಾ.25ರಂದು ಅಂತಿಮ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು. ಅಲ್ಲದೆ, ಅವರಿಗೆ ಪ್ರಧಾನಿ ನರೇಂದ್ರಮೋದಿ ಜತೆ ನೇರ ಸಂವಾದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ನಾಯಿಗಳನ್ನು ಹಿಡಿಯಲಾಗದವರು ಬೆಂಗಳೂರನ್ನು ಏನು ರಕ್ಷಣೆ ಮಾಡುತ್ತಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅರವಿಂದ ಲಿಂಬಾವಳಿ, 50 ವರ್ಷದಿಂದ ಅವರು ಸಾಕಿರುವ ನಾಯಿಗಳನ್ನು ಹಿಡಿಯಬೇಕಲ್ಲವೇ? ಅದಕ್ಕೆ ಕಷ್ಟ ಆಗುತ್ತೇ? ಎಂದರು.
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಮೇಲಿನ ಹತ್ಯೆ ಯತ್ನವನ್ನು ವಿರೋಧಿಸಿ ಮಾ.10ರಂದು ಬಿಜೆಪಿ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡಲಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಮುಖಂಡರಾದ ಎಸ್.ಪ್ರಕಾಶ್, ಆನಂದ್ ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ ಉಸ್ತುವಾರಿ ಪಿಯುಷ್ ಗೋಯೆಲ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಆರ್.ಅಶೋಕ್, ವಕ್ತಾರ ಅಶ್ವತ್ಥ ನಾರಾಯಣ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ರಾಜ್ಯ ಸರಕಾರವು ಯಾವ ನಿಯಮದಡಿಯಲ್ಲಿ ಪ್ರತ್ಯೇಕ ಕನ್ನಡ ಧ್ವಜವನ್ನು ಅಂಗೀಕಾರಗೊಳಿಸಿದೆ. ಯಾವ ನಿಯಮದಡಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುತ್ತದೆ ಎಂಬುದನ್ನು ಅಧ್ಯಯನ ನಡೆಸಿ ಈ ಬಗ್ಗೆ ಸ್ಪಷ್ಟ ಪ್ರತಿಕ್ರಿಯೆ ನೀಡುತ್ತೇನೆ.
-ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕ







