ಇಂದ್ರಾಳಿ ರೈಲು ನಿಲ್ದಾಣದಲ್ಲಿ ಸ್ಯಾನಿಟರಿ, ನ್ಯಾಪ್‌ಕಿನ್ ವೆಂಡಿಂಗ್ ಮಿಶಿನ್ ಉದ್ಘಾಟನೆ

ಉಡುಪಿ, ಮಾ.8: ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ವೆಂಡಿಂಗ್ ಮಿಶಿನ್‌ಗೆ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಗಣೇಶ್ ಗುರುವಾರ ಚಾಲನೆ ನೀಡಿದರು.
ರೈಲ್ವೆ ಇಲಾಖೆಯು ರೈಲು ನಿಲ್ದಾಣಗಳಿಗೆ ಮಹಿಳೆಯರಿಗೆ ಅನೇಕ ಅನು ಕೂಲಗಳನ್ನು ಒದಗಿಸಿದ್ದು, ಆರೋಗ್ಯ ಮತ್ತು ಸ್ವಚ್ಛತೆ ದೃಷ್ಟಿಯಿಂದ ನ್ಯಾಪ್‌ಕಿನ್ ಮಿಶನ್ ಅಳವಡಿಸಿರುವುದು ಶ್ಲಾಘನೀಯ. ಈ ರೀತಿಯ ಮಿಶನ್‌ಗಳನ್ನು ಶಾಲೆ, ಬಸ್ ನಿಲ್ದಾಣಗಳಲ್ಲೂ ಅಳವಡಿಸುವ ಕೆಲಸ ಆಗಬೇಕು ಎಂದು ನಯನ ಗಣೇಶ್ ಅಭಿಪ್ರಾಯ ಪಟ್ಟರು.
ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಮಾತನಾಡಿ, ಈ ರೀತಿಯ ಮಿಶನ್‌ಗಳನ್ನು ಉಡುಪಿ, ಮಡ್ಗಾಂವ್, ರತ್ನಗಿರಿ ರೈಲು ನಿಲ್ದಾಣಗಳಲ್ಲಿಯೂ ಆಳವಡಿಸಲಾಗುತ್ತಿದೆ. ರೈಲ್ವೆ ಇಲಾಖೆಯು ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ನೀಡಿದ್ದು, ಗರ್ಭಿಣಿಯರಿಗೆ ಟಿಕೆಟ್‌ನಲ್ಲಿ ಲೋವರ್ ಸೀಟ್, ಪ್ರತ್ಯೇಕ ಬೋಗಿ, ರೈಲು ನಿಲ್ದಾಣಗಳಲ್ಲಿ ಹಾಲುಣಿಸಲು ಪ್ರತ್ಯೇಕ ಕೊಠಡಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.
ವಾರ್ತಾಧಿಕಾರಿ ರೋಹಿಣಿ, ಮಹಿಳಾ ಮೋರ್ಚಾದ ಸುರೇಖಾ ಶೆಟ್ಟಿ, ಕುಸುಮಾ ವಿಶ್ವನಾಥ್, ರೈಲ್ವೆ ಇಲಾಖೆಯ ಕಮರ್ಷಿಯಲ್ ಸೂಪರ್‌ವೈಸರ್ ಸತೀಶ್ ಹೆಗ್ಡೆ, ರಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







