ರಾಜಕೀಯ ನಂಬಿಕೆಯಿದ್ದರೆ ಭಾರತ-ಚೀನಾ ಸ್ನೇಹವನ್ನು ಹಿಮಾಲಯವೂ ತಡೆಯದು
ಚೀನಾ ವಿದೇಶ ಸಚಿವ ವಾಂಗ್ ಯಿ

ಬೀಜಿಂಗ್, ಮಾ. 8: ಭಾರತ ಮತ್ತು ಚೀನಾಗಳು ತಮ್ಮ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸಲು ತಮ್ಮ ಮಾನಸಿಕ ಹಿಂಜರಿಕೆಗಳನ್ನು ತೊಡೆದುಹಾಕಬೇಕು ಎಂದು ಚೀನಾ ವಿದೇಶ ಸಚಿವ ವಾಂಗ್ ಯಿ ಬುಧವಾರ ಹೇಳಿದ್ದಾರೆ.
ಅದೇ ವೇಳೆ, ಈ ಎರಡು ದೇಶಗಳ ನಡುವೆ ರಾಜಕೀಯ ನಂಬಿಕೆಯಿದ್ದರೆ ಅವುಗಳ ನಡುವಿನ ಸ್ನೇಹವನ್ನು ಹಿಮಾಲಯವೂ ತಡೆಯಲಾರದು ಎಂದು ಅವರು ಅಭಿಪ್ರಾಯಪಟ್ಟರು.
ಪ್ರಸಕ್ತ ನಡೆಯುತ್ತಿರುವ ಸಂಸದ್ ಅಧಿವೇಶನದ ನೇಪಥ್ಯದಲ್ಲಿ ನಡೆಸಿದ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾತುಗಳನ್ನು ಹೇಳಿದರು.
ಡೋಕಾ ಲಾ ಬಿಕ್ಕಟ್ಟು ಸೇರಿದಂತೆ 2017ರಲ್ಲಿ ಹಲವಾರು ವಿವಾದಗಳಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಏರ್ಪಟ್ಟಿದ್ದರೂ, ಈ ವರ್ಷ ಭಾರತದೊಂದಿಗಿನ ಬಾಂಧವ್ಯವನ್ನು ಚೀನಾ ಹೇಗೆ ಪರಿಗಣಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಕೆಲವು ಸವಾಲುಗಳು ಮತ್ತು ಸಮಸ್ಯೆಗಳ ಹೊರತಾಗಿಯೂ, ಚೀನಾ-ಭಾರತ ಬಾಂಧವ್ಯ ಬೆಳಯುತ್ತಿದೆ’’ ಎಂದರು.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್, ಪಾಕಿಸ್ತಾನದಲ್ಲಿ ನೆಲೆಸಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೊಷಿಸುವ ವಿಶ್ವಸಂಸ್ಥೆಯ ಪ್ರಯತ್ನಗಳಿಗೆ ಚೀನಾ ಅಡ್ಡಗಾಲು ಹಾಕಿರುವುದು ಹಾಗೂ ಪರಮಾಣು ಪೂರೈಕೆದಾರರ ಗುಂಪಿಗೆ ಸೇರ್ಪಡೆಗೊಳ್ಳುವ ಭಾರತದ ಯತ್ನವನ್ನು ಚೀನಾ ತಡೆದಿರುವುದು ಸೇರಿದಂತೆ ಹಲವಾರು ವಿವಾದಗಳಿಂದಾಗಿ ಭಾರತ-ಚೀನಾ ಸಂಬಂಧ ಹಳಸಿತ್ತು.
‘‘ಚೀನಾ ತನ್ನ ಹಕ್ಕುಗಳು ಮತ್ತು ನ್ಯಾಯಸಮ್ಮತ ಹಿತಾಸಕ್ತಿಗಳನ್ನು ಎತ್ತಿಹಿಡಿಯುತ್ತಿದೆ ಹಾಗೂ ಭಾರತದೊಂದಿಗಿನ ಸಂಬಂಧವನ್ನು ಕಾಪಾಡಿಕೊಳ್ಳಲು ಕ್ರಮಗಳನ್ನು ತೆಗೆದಕೊಳ್ಳುತ್ತಿದೆ’’ ಎಂದು ವಾಂಗ್ ನುಡಿದರು.







