ಮಾ.11: ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾವೇಶ
ಉಡುಪಿ, ಮಾ.8: ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾವೇಶ ಮಾ.11ರಂದು ಬನ್ನಂಜೆಯ ಶ್ರೀನಾರಾಯಣಗುರು ಸಭಾ ಭವನದಲ್ಲಿ ಬೆಳಗ್ಗೆ 9ರಿಂದ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಯತೀಶ್ ಕರ್ಕೇರ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿಷಯದ ತಿಳಿಸಿದ ಅವರು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಮಾರ್ಗದರ್ಶನದಂತೆ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ಬೆಳಗ್ಗೆ 9ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ವಹಿಸಲಿದ್ದಾರೆ. ಬಳಿಕ ಮಹಿಳಾ ಸಂಘಟನೆಗಳಿಗೆ ಜಿಲ್ಲಾ ಮಟ್ಟದ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ. ಇದರ ವಿಜೇತರಿಗೆ 15,000 ರೂ.ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಹಾಗೂ ತೃತೀಯ ಸ್ಥಾನಿಗಳಿಗೆ ಕ್ರಮವಾಗಿ 10ಸಾವಿರ ಮತ್ತು 5ಸಾವಿರ ರೂ.ನಗದು ಬಹುಮಾನವಿದೆ. ಭಾಗವಹಿಸಿದ ಪ್ರತಿ ತಂಡಗಳಿಗೆ ಪ್ರೋತ್ಸಾಹ ಬಹುಮಾನಗಳಿವೆ ಎಂದರು.
ಸಮಾರೋಪ ಸಮಾರಂಭ ಅಪರಾಹ್ನ 3:00ಗಂಟೆಗೆ ಕರ್ನಾಟಕ ರಾಜ್ಯ ಹಿಂದುಳಿದ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಸ್ಕರ್ ಫೆರ್ನಾಂಡೀಸ್ ಅವರು ಸಮಾವೇಶ ಉದ್ಘಾಟಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಪ್ರಮೋದ ಮದ್ವರಾಜ್, ಶಾಸಕರಾದ ವಿನಯಕುಮಾರ ಸೊರಕೆ, ಕೆ.ಗೋಪಾಲ ಪೂಜಾರಿ, ಪ್ರತಾಪಚಂದ್ರ ಶೆಟ್ಟಿ, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಮುಂತಾದವರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣರಾಜ್, ಪ್ರಖ್ಯಾತ ಶೆಟ್ಟಿ, ರಾಘವೇಂದ್ರ ಕುಂದರ್, ದೀಪಕ್ ಎರ್ಮಾಳ್, ಯತೀಶ್ ಕಡೆಕಾರು ಉಪಸ್ಥಿತರಿದ್ದರು.







