ಉದ್ಯಾವರದಲ್ಲಿ ಪ್ರೊ ಕಬಡ್ಡಿ ಪಂದ್ಯಾಟ-2018
ಉಡುಪಿ, ಮಾ.8: ಉದ್ಯಾವರ ಯುವಕ ಮಂಡಲ ಉದ್ಯಾವರ, ಕರ್ನಾಟಕ ರಾಜ್ಯ ಹಾಗೂ ಉಡುಪಿ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆಯ ಸಹಯೋಗದಲ್ಲಿ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾಟ-2018ನ್ನು ಮಾ.10 ಹಾಗೂ 11ರಂದು ಉದ್ಯಾವರದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದೆ ಎಂದು ಉಡುಪಿ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಕೆ.ರಾಜೇಂದ್ರ ಸುವರ್ಣ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಲ್ಲಿ ರಾಜ್ಯದ ಖ್ಯಾತನಾಮ ಪುರುಷ ಹಾಗೂ ಮಹಿಳಾ ಕಬಡ್ಡಿಗಳು ಪಾಲ್ಗೊಳ್ಳಲಿವೆ ಎಂದರು.
ಪಂದ್ಯಾಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರ ಅಧ್ಯಕ್ಷತೆಯಲ್ಲಿ ಮಾ.10ರ ಶನಿವಾರ ಸಂಜೆ 7:00 ಗಂಟೆಗೆ ಉದ್ಘಾಟಿಸಲಿದ್ದಾರೆ. ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಮಾ.11ರ ರವಿವಾರ ರಾತ್ರಿ 10ಗಂಟೆಗೆ ನಡೆಯಲಿದ್ದು, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ವಿಲ್ಸನ್ ರಾಜ್‌ಕುಮಾರ್ ಬಹುಮಾನ ವಿತರಿಸಲಿದ್ದಾರೆ. ಉದ್ಯಾವರ ಶಂಭುಕಲ್ಲು ಶ್ರೀವೀರಭದ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ತೀರ್ಪುಗಾರರಾಗಿರುವ ಜಮುನಾ ವೆಂಕಟೇಶ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ವಿಶ್ವದಾಖಲೆ ಮಾಡಿರುವ ಬಹುಮುಖ ಪ್ರತಿಭೆಯ ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸ ಲಾಗುವುದು ಎಂದು ಸುವರ್ಣ ತಿಳಿಸಿದರು.
ಜಿಲ್ಲಾ ಸಂಸ್ಥೆಯ ವತಿಯಿಂದ ಶೀಘ್ರದಲ್ಲೇ ಜಿಲ್ಲೆಯ ಗ್ರಾಮೀಣ ಪ್ರದೇಶದ ಕಬಡ್ಡಿ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಕುಂದಾಪುರದಲ್ಲಿ ತರಬೇತಿ ಶಿಬಿರ ವೊಂದನ್ನು ಆಯೋಜಿಸಲಾಗುವುದು. ತರಬೇತಿ ನೀಡಲು ಮುಂಬಯಿಯ ಮುಂಬಾ ತಂಡದ ಮುಖ್ಯ ತರಬೇತುದಾರರ ರವಿ ಶೆಟ್ಟಿ ಮುಂಬಯಿ ಆಗಮಿಸಲಿದ್ದಾರೆ ಎಂದೂ ರಾಜೇಂದ್ರ ಸುವರ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ತಾಲೂಕು ಸಂಘದ ಅಧ್ಯಕ್ಷ ಹಾಗೂ ಪಂದ್ಯಾಟ ಸಮಿತಿ ಸಂಚಾಲಕ ಸುಧಾಕರ ಕೋಟ್ಯಾನ್, ಉದ್ಯಾವರ ಯುವಕ ಮಂಡಲದ ಅಧ್ಯಕ್ಷ ಅನಿತ್ ಜತ್ತನ್ನ, ಆಲ್ವಿನ್ ಅಂದ್ರಾದೆ, ಎಸ್.ಕೆ.ಪ್ರಾಣೇಶ್ ಉಸ್ಥಿತರಿದ್ದರು.







