ಆಳ್ವಾಸ್ ಸಂಸ್ಥೆಗೆ ಕ್ರೀಡಾಪೋಷಕ್, ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ

ಮೂಡುಬಿದಿರೆ, ಮಾ.8: ಕರ್ನಾಟಕ ರಾಜ್ಯ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಸಾಧಕರಿಗೆ ಪುರಸ್ಕಾರ ಸಮಾರಂಭದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಕ್ರೀಡಾಪೋಪಕ ಪ್ರಶಸ್ತಿ ಲಭಿಸಿದ್ದು, ಸಂಸ್ಥೆಯ ಎರಡು ಕ್ರೀಡಾಪಟುಗಳು ಏಕಲವ್ಯ ಹಾಗೂ ಮೂರು ಕ್ರೀಡಾಪಟುಗಳು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾಗಿರುವುದು ನಮ್ಮ ಸಂಸ್ಥೆಯ ಹೆಮ್ಮೆ ಉಂಟುಮಾಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರರಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
1984ರಲ್ಲಿ ಏಕಲವ್ಯ ಕ್ರೀಡಾಸಂಸ್ಥೆಯನ್ನು ಸ್ಥಾಪಿಸಿ, ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಆಶ್ರಯನೀಡಿ ತದನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮೂಲಕ ಸಾವಿರಾರು ಮಂದಿ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣದೊಂದಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟೀಯ ಮಟ್ಟದಲ್ಲಿ ಸಾಧನೆಗೈಯಲು ಪೋಷಣೆ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ‘ಕ್ರೀಡಾ ಪೋಷಕ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಹರ್ಷಿತ್ ಎಸ್ ಎತ್ತರ ಜಿಗಿತದಲ್ಲಿ ಪ್ರಸ್ತುತ ರಾಷ್ಟ್ರೀಯ ಜೂನಿಯರ್ ದಾಖಲೆಯನ್ನು ಹೊಂದಿದ್ದು, 2012ರಲ್ಲಿ ವಿಶ್ವ ಜೂನಿಯರ್ ಹಾಗೂ ಏಷ್ಯನ್ ಜೂನಿಯರ್ ಕ್ರೀಡಾಕೂಟಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದು ’ಏಕಲವ್ಯ ಪ್ರಶಸ್ತಿ’ಯನ್ನು ಪಡೆದಿರುತ್ತಾರೆ. ಆಳ್ವಾಸ್‌ನ ಹಳೆವಿದ್ಯಾರ್ಥಿ ಪ್ರಸ್ತುತ ವಿಜಯ ಬ್ಯಾಂಕಿನ ಉದ್ಯೋಗಿ ಸುಕೇಶ್ ಹೆಗ್ಡೆ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟುವಾಗಿದ್ದು, ಪ್ರೊ ಕಬಡ್ಡಿಯಲ್ಲಿ ಮಿಂಚಿನ ಸಾಧನೆ ಮಾಡಿದ್ದು ’ಏಕಲವ್ಯ ಪ್ರಶಸ್ತಿ’ಯನ್ನು ಪಡೆದಿದ್ದಾರೆ. ಆಳ್ವಾಸ್‌ನ ವಿದ್ಯಾರ್ಥಿನಿ ಕೆ.ಜೆ.ಯಶಸ್ವಿನಿ ರಾಷ್ಟ್ರೀಯ ಸೀನಿಯರ್, ಫೆಡರೇಶನ್ ಕಪ್ ಹಾಗೂ ಅಖಿಲ ಭಾರತ ವಿ.ವಿಯಲ್ಲಿ ಚಿನ್ನದ ಪದಕ ಪಡೆದಿದ್ದು, ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಖಿಲ ಭಾರತ ವಿ.ವಿ.ಮಟ್ಟದಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚು ಹಾಗೂ ರಾಜ್ಯ ಹಾಗೂ ರಾಷ್ಟ್ರೀಯ ವಲಯದಲ್ಲಿ ಪ್ರಶಸ್ತಿ ಪಡೆದಿರುವ ಕುಸ್ತಿಪಟು ಆತ್ಮಶ್ರೀ ಎಚ್.ಎಸ್.ಕ್ರೀಡಾರತ್ನ ಪ್ರಶಸ್ತಿ ಪಡೆದಿದ್ದು, ಆಳ್ವಾಸ್‌ನ ಹಳೆವಿದ್ಯಾರ್ಥಿ ಸುಗುಣ್ ಸಾಗರ್ ಮಲ್ಲಕಂಬದಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆಗಾಗಿ ಕ್ರೀಡಾರತ್ನ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಅದೇ ರೀತಿ ನಮ್ಮ ಸಂಸ್ಥೆಯ ಅಂತಾರಾಷ್ಟ್ರೀಯ ಕುಸ್ತಿ ಕ್ರೀಡಾಪಟು ಮಮತಾ ಕೇಳೋಜಿ ಹಾಗೂ ರಾಷ್ಟ್ರೀಯ ಕ್ರೀಡಾಪಟು ಐಶ್ವರ್ಯ (ರೂ.2.5 ಲಕ್ಷ). ರಾಷ್ಟ್ರೀಯ ಕುಸ್ತಿಪಟುಗಳಾದ ಮಹಾಲಕ್ಷ್ಮೀ ಸಿದ್ಧಿ ಮತ್ತು ಅರ್ಪಣಾ ಸಿದ್ಧಿ, ರಾಷ್ಟ್ರೀಯ ಕಬಡ್ಡಿ ಆಟಗಾರ ರಕ್ಷಿತ್ ಪೂಜಾರಿ, ರಾಷ್ಟ್ರೀಯ ಕ್ರೀಡಾಪಟು ರಚನಾ ಅವರಿಗೆ (ರೂ1.5 ಲಕ್ಷ)'Financial Assistance Under Sports Academy For Excellence' ಇದರ ಅಡಿಯಲ್ಲಿ ನಗದು ಪುರಸ್ಕಾರ ನೀಡಿ ಗೌರವಿಸಲಾಗಿದೆ ಎಂದು ಮೋಹನ ಆಳ್ವ ತಿಳಿಸಿದರು.







