ಸರಕಾರಿ ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಅಲಿಖಿತ ನಿಯಮ ಮುರಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
.jpg)
ಹೊಸದಿಲ್ಲಿ,ಮಾ.8: ಕೇಂದ್ರ ಸರಕಾರದ ನಾರಿಶಕ್ತಿ ಪುರಸ್ಕಾರವನ್ನು ಸ್ವೀಕರಿಸುವ ದಿಲ್ಲಿ ಉಚ್ಚ ನ್ಯಾಯಾಲಯದ ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ನಿರ್ಧಾರ ಕಾನೂನು ತಜ್ಞರಿಗೆ ಪಥ್ಯವಾಗಿಲ್ಲ. ಇದನ್ನು ಹಿತಾಸಕ್ತಿಗಳ ಸಂಘರ್ಷದ ಸಂಭಾವ್ಯತೆ ಎಂದು ಪರಿಗಣಿಸಬಹುದಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
ಈ ವರ್ಷದ 30 ಪ್ರಶಸ್ತಿ ಪುರಸ್ಕೃತರಲ್ಲಿ ಓರ್ವರಾಗಿರುವ ನ್ಯಾ.ಮಿತ್ತಲ್ ಅವರು ಬಹುಶಃ ಸರಕಾರಿ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ಹಾಲಿ ನ್ಯಾಯಾಧೀಶರಾಗಿದ್ದಾರೆ.
ನ್ಯಾಯಾಂಗ ನೀತಿ ಸಂಹಿತೆಯು ನ್ಯಾಯಾಧೀಶರು ಪ್ರಶಸ್ತಿಯೊಂದನ್ನು ಸ್ವೀಕರಿಸುವುದನ್ನು ಸ್ಪಷ್ಟವಾಗಿ ನಿಷೇಧಿಸಿಲ್ಲವಾದರೂ ಯಾವುದೇ ಹಾಲಿ ನ್ಯಾಯಾಧೀಶರನ್ನು ಈವರೆಗೆ ಪ್ರಶಸ್ತಿಗಳಿಗೆ ಪರಿಗಣಿಸಲಾಗಿರಲಿಲ್ಲ.
ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಪಿ.ಎನ್.ಭಗವತಿ ಮತ್ತು ಎಂ.ಎನ್.ವೆಂಕಟಾಚಲಯ್ಯ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಗಳನ್ನು ಅವರ ನಿವೃತ್ತಿಯ ಬಳಿಕವೇ ನೀಡಲಾಗಿತ್ತು. ಇನ್ನೋರ್ವ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತಾದರೂ ಅವರ ಕುಟುಂಬವು ಅದನ್ನು ನಿರಾಕರಿಸಿತ್ತು.
ಇದೇ ಒಂದು ಪ್ರವೃತ್ತಿಯಾಗಿ ಬೆಳೆದರೆ ಅದು ಅಪಾಯಕಾರಿಯಾಗಲಿದೆ ಎಂದು ಹೇಳಿದ ಹಿರಿಯ ನ್ಯಾಯವಾದಿ ಸಂಜಯ ಹೆಗ್ಡೆ ಅವರು, ನ್ಯಾಯಾಂಗವು ಸ್ವತಂತ್ರವಾಗಿ ರಬೇಕು ಮಾತ್ರವಲ್ಲ, ಅದು ಸ್ವತಂತ್ರವೆಂದು ಪರಿಗಣಿಸಲೂ ಬೇಕು. ಇದು ಹೆಚ್ಚಾಗಿ ದೃಷ್ಟಿಕೋನದ ವಿಷಯವಾಗಿದೆ ಎಂದು ಹೇಳಿದರು.
ನ್ಯಾ.ಮಿತ್ತಲ್ ಅವರು ಸರಕಾರದ ಪ್ರಶಸ್ತಿಯನ್ನು ಸ್ವೀಕರಿಸಿರುವುದರಿಂದ ಸರಕಾರವು ಕಕ್ಷಿಯಾಗಿರುವ ಯಾವುದೇ ಪ್ರಕರಣದ ವಿಚಾರಣೆಯಿಂದ ಅವರನ್ನು ಅನರ್ಹಗೊಳಿಸಬೇಕು ಎಂದು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಟ್ವೀಟಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕೊಡಮಾಡಿರುವ ಪ್ರಶಸ್ತಿಯು ಪ್ರಶಂಸಾಪತ್ರದ ಜೊತೆಗೆ ಒಂದು ಲಕ್ಷ ರೂ.ನಗದು ಬಹುಮಾನವನ್ನು ಒಳಗೊಂಡಿದೆ. ನ್ಯಾ.ಮಿತ್ತಲ್ ಅವರು ಹಾಲಿ ವಿಚಾರಣೆ ನಡೆಸುತ್ತಿರುವ ಹಲವಾರು ಪ್ರಕರಣಗಳಲ್ಲಿ ಇದೇ ಸಚಿವಾಲಯವು ಕಕ್ಷಿದಾರನಾಗಿದೆ.
ನಗದು ಬಹುಮಾನವನ್ನು ದತ್ತಿಕಾರ್ಯಗಳಿಗೆ ದೇಣಿಗೆ ನೀಡುವುದಾಗಿ ನ್ಯಾ.ಮಿತ್ತಲ್ ಅವರು ಈಗಾಗಲೇ ಹೇಳಿದ್ದಾರಾದರೂ, ಇದು ಟೀಕಾಕಾರರ ಮೇಲೆ ಯಾವುದೇ ಪ್ರಭಾವವನ್ನು ಬೀರಿಲ್ಲ.







