ಶರಪೋವಾಗೆ ಸೋಲು

ಇಂಡಿಯನ್‌ವೆಲ್ಸ್, ಮಾ.8: ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾ ಡಬ್ಲುಟಿಎ ಇಂಡಿಯನ್ ವೆಲ್ಸ್ ಟೂರ್ನಮೆಂಟ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ.
ಬುಧವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಶರಪೋವಾ ಜಪಾನ್‌ನ ನಯೊಮಿ ಒಸಾಕಾ ವಿರುದ್ಧ 6-4, 6-4 ನೇರ ಸೆಟ್‌ಗಳಿಂದ ಸೋತಿದ್ದಾರೆ. ವಿಶ್ವದ ಮಾಜಿ ನಂ.1 ಆಟಗಾರ್ತಿ, ಎರಡು ಬಾರಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಜಯಿಸಿರುವ ಶರಪೋವಾ ಈ ಬಾರಿ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದರು. ಕಳೆದ ಎರಡು ಟೂರ್ನಿಯಲ್ಲಿ ಶರಪೋವಾ ಆಡಿರಲಿಲ್ಲ. ‘‘ನಾನು ಈ ಬಾರಿ ಉತ್ತಮ ಪ್ರದರ್ಶನ ನೀಡಬೇಕೆಂದು ಬಯಸಿದ್ದೆ. ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿದ್ದೇನೆ’’ ಎಂದು ಶರಪೋವಾ ಹೇಳಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ದುಬೈ ಟೂರ್ನಮೆಂಟ್‌ನಿಂದ ಹಿಂದೆ ಸರಿದ ಬಳಿಕ ಶರಪೋವಾ ಸತತ ಎರಡನೇ ಬಾರಿ ಮೊದಲ ಸುತ್ತಿನಲ್ಲಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಈ ವರ್ಷದ ಆಡಿರುವ ಏಕೈಕ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಸುತ್ತಿಗೆ ತಲುಪಿದ್ದ ಶರಪೋವಾ ಆಂಜೆಲಿಕ್ ಕೆರ್ಬರ್ ವಿರುದ್ಧ ಸೋತಿದ್ದರು.





