ಗುಪ್ತಚರ ಆಯುಕ್ತರ ವರದಿಯ ಬಗ್ಗೆ ವಕೀಲ ದುಷ್ಯಂತ್ ದವೆ ವ್ಯಕ್ತಪಡಿಸಿದ ಸಂಶಯಗಳೇನು?
ನ್ಯಾ. ಲೋಯಾ ಸಾವು ಪ್ರಕರಣ

ಹೊಸದಿಲ್ಲಿ, ಮಾ.9: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಬಿ.ಎಚ್. ಲೋಯಾ ಅವರ ಸಾವಿನ ಕುರಿತು ರಹಸ್ಯ ತನಿಖಾ ವರದಿ ತಯಾರಿಸುವಲ್ಲಿ ಮಹಾರಾಷ್ಟ್ರ ಗುಪ್ತಚರ ಆಯುಕ್ತರ ಪಾತ್ರವನ್ನು ಈ ಪ್ರಕರಣದ ದೂರುದಾರರ ವಕೀಲ ದುಷ್ಯಂತ್ ದವೆ ಗುರುವಾರ ನಡೆದ ವಿಚಾರಣೆಯ ವೇಳೆ ಉಲ್ಲೇಖಿಸಿದ್ದಾರೆ.
ಕಾರವಾನ್ ಮ್ಯಾಗಝಿನ್ ನಲ್ಲಿ ಲೋಯಾ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರಕಟವಾದ ವರದಿಯ ನಂತರ ಗುಪ್ತಚರ ಆಯುಕ್ತರು ತಮ್ಮ ಕಚೇರಿಯಿಂದ ಹೊರಗೆ ಕಾಲಿರಿಸದೆಯೇ ಈ ಪ್ರಕರಣದ ಅವಸರದ ವರದಿ ತಯಾರಿಸಿದ್ದನ್ನು ದವೆ ಅವರು ಪ್ರಶ್ನಿಸಿದರು. ಬೇರೆ ಯಾವುದೇ ತನಿಖೆ ನಡೆಯುವುದನ್ನು ತಡೆಯಲೆಂದೇ ಅವಸರವಸರವಾಗಿ ತನಿಖೆ ನಡೆಸಲಾಗಿತ್ತು, ಎಂದು ದವೆ ಆರೋಪಿಸಿದ್ದಾರೆ. ಕಾರವಾನ್ ವರದಿ ಸುಳ್ಳೆಂದು ಮಹಾರಾಷ್ಟ್ರ ಸರಕಾರ ಹೇಳುತ್ತಿದೆ, ಹಾಗಾದರೆ ಇಷ್ಟೊಂದು ಅವಸರದಲ್ಲಿ ವರದಿ ಏಕೆ ತಯಾರಿಸಲಾಯಿತು ಎಂದೂ ಅವರು ಪ್ರಶ್ನಿಸಿದ್ದಾರೆ.
ಕಾರವಾನ್ ಪ್ರಕಟಿಸಿದ ಮೊದಲ ವರದಿಯಲ್ಲಿ ಲೋಯಾ ಅವರೊಂದಿಗೆ ನವೆಂಬರ್ 29ರಿಂದ ಡಿಸೆಂಬರ್ 1, 2014ರ ತನಕ ಇದ್ದ ನಾಲ್ಕು ಮಂದಿ ನ್ಯಾಯಾಧೀಶರುಗಳ ಹೆಸರು ಉಲ್ಲೇಖಿಸದೇ ಇದ್ದರೂ ಯಾವುದೇ ತನಿಖೆ ನಡೆಸದೆ ಗುಪ್ತಚರ ಆಯುಕ್ತರಿಗೆ ಅವರ ಹೆಸರುಗಳು ಹೇಗೆ ದೊರಕಿತ್ತು ಎಂದು ಪ್ರಶ್ನಿಸಿದರು. ಈ ನ್ಯಾಯಾಧೀಶರುಗಳ ಹೇಳಿಕೆ ದಾಖಲಿಸಲು ಆಯುಕ್ತರು ಅನುಮತಿ ಕೋರಿದ ದಿನವೇ ಬಾಂಬೆ ಹೈಕೋರ್ಟ್ ಅದಕ್ಕೆ ನ್ಯಾಯಾಲಯದ ಕಲಾಪ ನಡೆಸದೆಯೇ ಹೇಗೆ ಅನುಮತಿ ನೀಡಿತು ಎಂದು ದವೆ ಕೇಳಿದರಲ್ಲದೆ ಈ ವರದಿಯನ್ನು ತಿರಸ್ಕರಿಸಬೇಕೆಂದೂ ಆಗ್ರಹಿಸಿದರು.
ಲೋಯಾ ಸಾವು ಪ್ರಕರಣದ ಸ್ವತಂತ್ರ ತನಿಖೆ ಕೋರಿ ಸಲ್ಲಿಸಲಾಗಿರುವ ಅಪೀಲಿನ ಮೇಲಿನ ವಿಚಾರಣೆ ಇಂದೂ ಮುಂದುವರಿಯುತ್ತಿದೆ.







