ಶಿಕಾರಿಪುರ : ಪ್ರಧಾನಮಂತ್ರಿ ಸುರಕ್ಷಾ ಮಾತೃತ್ವ ಯೋಜನೆ ಕಾರ್ಯಕ್ರಮ

ಶಿಕಾರಿಪುರ,ಮಾ.9: ಹಣ ಗಳಿಕೆಗಿಂತ ಆರೋಗ್ಯ ಗಳಿಕೆ ಕಡೆಗೆ ಜನತೆ ಹೆಚ್ಚಿನ ನಿಗಾವಹಿಸಬೇಕಾಗಿದ್ದು ಆದರೆ ಹಲವರು ಆರೋಗ್ಯಗಳಿಕೆಗಿಂತ ಹಣ ಗಳಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದು ಇಲ್ಲಿನ ತಾಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ ನಾಗಲೀಕರ್ ಕಳವಳ ವ್ಯಕ್ತಪಡಿಸಿದರು.
ಶುಕ್ರವಾರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸುರಕ್ಷಾ ಮಾತೃತ್ವ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮುದಾಯದ ಆರೋಗ್ಯ ಸುಧಾರಣೆಗಾಗಿ ಹೆಚ್ಚಿನ ಮಹತ್ವ ನೀಡಿದ್ದು ಈ ದಿಸೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತೀಕರಣಗೊಳಿಸಿ ಹಲವು ಸೌಲಭ್ಯವನ್ನು ಕಲ್ಪಿಸಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿನ ಸೌಲಭ್ಯಗಳನ್ನು ಪಡೆಯಲು ಹಲವರಿಗೆ ಹಿಂಜರಿಕೆ ಕಾಡುತ್ತಿದ್ದು, ನುರಿತ ತಜ್ಞ ವೈದ್ಯರನ್ನು ಹೊಂದಿರುವ ಸರ್ಕಾರಿ ಆಸ್ಪತ್ರೆಯಲ್ಲಿನ ಸೇವೆಯನ್ನು ಪ್ರತಿಯೊಬ್ಬರೂ ಪಡೆಯುವಂತೆ ತಿಳಿಸಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದು ಈ ದಿಸೆಯಲ್ಲಿ ಇದೀಗ ಮಾತೃತ್ವ ಯೋಜನೆ ಮುಖ್ಯವಾಗಿದೆ. ಯೋಜನೆಯಡಿ ಪ್ರತಿ ತಿಂಗಳ 9 ರಂದು ಗರ್ಭಿಣಿ ಮಹಿಳೆಯರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.ಉಚಿತ ರಕ್ತ ಪರೀಕ್ಷೆ, ಸ್ಕ್ಯಾನಿಂಗ್, ಗುಣಮಟ್ಟದ ಔಷಧ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರದ ಆರೋಗ್ಯ ಸೇವೆಯನ್ನು ಸಮುದಾಯದ ಪ್ರತಿಯೊಬ್ಬರೂ ಪಡೆದು ಸದೃಡ ಹಾಗೂ ಆರೋಗ್ಯಯುತವಾದ ಸಮಾಜವನ್ನು ನಿರ್ಮಿಸುವಂತೆ ಕರೆ ನೀಡಿದರು.
ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ.ಗೋವರ್ಧನ್ ಮಾತನಾಡಿ, ಗರ್ಭಿಣಿ ಮಹಿಳೆಯರು ಅತೀ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದ್ದು ಕೇವಲ ವೈಯುಕ್ತಿಕ ಹಿತಾಸಕ್ತಿಗಾಗಿ ಮಾತ್ರವಲ್ಲದೆ ಆರೋಗ್ಯಯುತವಾದ ಶಿಶು ಪಡೆಯಲು ನಿರ್ಲಕ್ಷ ವಹಿಸದಂತೆ ತಿಳಿಸಿದರು.
ಆಸ್ಪತ್ರೆಯಲ್ಲಿ ಸುಸೂತ್ರ ಹೆರಿಗೆಗಾಗಿ ಸಕಲ ಸೌಲಭ್ಯಗಳಿದ್ದು ಇದರೊಂದಿಗೆ ತಾಯಿ ಮಗುವಿನ ಆರೋಗ್ಯಕ್ಕಾಗಿ ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಿಕ ಸಹಾಯವಾಣಿ ಕೇಂದ್ರದ ವ್ಯವಸ್ಥಾಪಕ ಮಂಜಪ್ಪ, ಸುಗಮಗಾರ ಈಶ್ವರನಾಯ್ಕ, ಆರೋಗ್ಯ ಇಲಾಖೆಯ ಸಿಬ್ಬಂದಿ ಜ್ಯೋತಿಕಿರಣ್, ಚಂದ್ರಶೇಖರ್, ಎಲಿಜಬೆತ್, ಜಗದೀಶ್, ಅಕ್ಷತಾ, ಅಪ್ಸರಾ ಬೇಗಂ ಮತ್ತಿತರರು ಹಾಜರಿದ್ದರು.







