ನಕ್ಸಲ್ ಭೀತಿ; ಬಂದೂಕು ಠೇವಣಿಗೆ ಅವಕಾಶ ಬೇಡ :ಮಡಿಕೇರಿ ತಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

ಮಡಿಕೇರಿ,ಮಾ.9 :ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ನಕ್ಸಲ್ ಭೀತಿ ಇರುವುದರಿಂದ ಚುನಾವಣೆ ಸಂದರ್ಭ ಬಂದೂಕು ಠೇವಣಿಗೆ ಅವಕಾಶ ನೀಡಬಾರದೆಂದು ತಾ.ಪಂ ಸದಸ್ಯರು ಆಗ್ರಹಿಸಿದ್ದಾರೆ.
ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಕ್ಸಲರ ಭೇಟಿ ಕುರಿತು ಆತಂಕ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿ ಕೋವಿ ಹಕ್ಕು ಹೊಂದಿರುವವರು ಚುನಾವಣೆ ಸಂದರ್ಭ ನಿಯಮಾನುಸಾರ ತಮ್ಮ ತಮ್ಮ ಕೋವಿಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವುದು ಸಾಮಾನ್ಯ. ಆದರೆ ಈ ಬಾರಿ ನಕ್ಸಲರ ಓಡಾಟ ಹೆಚ್ಚಾಗಿರುವುದರಿಂದ ಕೋವಿ ಠೇವಣಿ ಕ್ರಮಕ್ಕೆ ರಿಯಾಯಿತಿ ನೀಡಬೇಕು ಎಂದು ಸದಸ್ಯ ನಾಗೇಶ್ ಕುಂದಲ್ಪಾಡಿ ಒತ್ತಾಯಿಸಿದರು.
ಮಡಿಕೇರಿ ತಾ.ಪಂ ವ್ಯಾಪ್ತಿಯಲ್ಲಿ ನಕ್ಸಲ್ ಸಮಸ್ಯೆ ಹೆಚ್ಚಾಗಿದ್ದು, ಜನತೆ ಆತಂಕದಲ್ಲಿದ್ದಾರೆ. ತಾಲೂಕು ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದಂತೆ ನಕ್ಸಲ್ ಹಾವಳಿ ಇರುವ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್‍ನಡಿ ಅನುದಾನ ಲಭ್ಯವಿದೆ. ಸಂಪಾಜೆ, ಕಕ್ಕಬ್ಬೆ ಸೇರಿದಂತೆ ಮಡಿಕೇರಿ ತಾಲೂಕಿನ ನಕ್ಸಲ್ ಗ್ರಾಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಒದಗಿಸಬೇಕು ಎಂದು ಕುಂದಲ್ಪಾಡಿ ಒತ್ತಾಯಿಸಿದರು. ಈ ಸಲಹೆಗೆ ಇತರ ಸದಸ್ಯರು ಕೂಡ ಧ್ವನಿಗೂಡಿಸಿದರು.
ವರ್ಗಾವಣೆಗೆ ಸೂಚನೆ
ಒಂದೇ ಶಾಲೆಯಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ವರ್ಗಾವಣೆಗೊಳಿಸುವಂತೆ ಅಧ್ಯಕ್ಷರಾದ ಶೋಭಾ ಮೋಹನ್ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಮಾತನಾಡಿ ಯಾವುದಾದರು ಶಿಕ್ಷಕರ ವಿರುದ್ಧ ದೂರುಗಳಿದ್ದರೂ ವರ್ಗಾವಣೆಗೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಮಡಿಕೇರಿ ತಾಲೂಕಿನಲ್ಲಿ 2018-19 ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ ಪ್ರವೇಶ ಪ್ರಕ್ರಿಯೆಯನ್ನು ಆನ್‍ಲೈನ್ ಮೂಲಕ ನಡೆಸಲಾಗುತ್ತದೆ. ಫೆ.20 ರಿಂದ ಮಾ. 20 ರೊಳಗೆ ದಾಖಲಾತಿ ಕೋರಿ ಪೋಷಕರು ತಾವು ಇಚ್ಛಿಸಿರುವ ಶಾಲೆಗಳಿಗೆ ಆನ್‍ಲೈನ್ ಮೂಲಕ ಅಗತ್ಯ ದಾಖಲಾತಿಗಳ ಸಹಿತ ಗರಿಷ್ಠ 5 ಶಾಲೆಗಳಿಗೆ ಆದ್ಯತೆ ಗುರುತಿಸಿ ಒಂದು ಅರ್ಜಿ ಸಲ್ಲಿಸಬಹುದು ಎಂದು ಬಿಇಒ ಸಭೆಯ ಗಮನ ಸೆಳೆದರು.
ಮಡಿಕೇರಿ ತಾಲೂಕಿನಲ್ಲಿ ಮಾತೃಪೂರ್ಣ ಯೋಜನೆಗೆ ಸ್ಪಂದನೆ ದೊರೆಯುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ದಮಯಂತಿ ಕೇವಲ ಶೇ.20 ರಷ್ಟು ಸಾಧನೆಯಾಗಿದೆ ಎಂದರು.
ಹಮ್ಮಿಯಾಲ ಮುಟ್ಲು ಭಾಗದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಸಮಸ್ಯೆಯಿದೆ. ಜನತೆ ಕತ್ತಲಲ್ಲಿ ದಿನಕಳೆಯುವಂತೆ ಆಗಿದೆ ಎಂದು ಸಾಮಾಜಿಕ ನ್ಯಾಯ ಸಮಿತಿ ಸದಸ್ಯ ರಾಯ್ ತಮ್ಮಯ್ಯ ಅಧಿಕಾರಿಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ದೊಡ್ಡಮನಿ, ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಹಾರಿಕೆಯ ಉತ್ತರ ನೀಡಲು ಮುಂದಾದರು. ಈ ಸಂದರ್ಭ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ತಾಲೂಕಿನ ವಿವಿಧೆಡೆ ವಿದ್ಯುತ್ ಸಮಸ್ಯೆ ಗಂಭೀರವಾಗಿದ್ದರೂ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ತಳಮಟ್ಟದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಆರೋಪಿಸಿದರು.
ಮುಟ್ಲು ಹಮಿಯಾಲ ಭಾಗದಲ್ಲಿ ರಸ್ತೆ ಅಗಲೀಕರಣವಾಗುತ್ತಿರುವ ಕಾರಣ ಬೆಳಗ್ಗಿನ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಅಧಿಕಾರಿ ದೊಡ್ಡಮನಿ ಸ್ಪಷ್ಟಪಡಿಸಿದರು.
ಅಧ್ಯಕ್ಷೆ ಶೋಭಾ ಮೋಹನ್ ಮಾತನಾಡಿ ಇಲಾಖೆಯಲ್ಲಿ ವಿವಿಧ ಯೋಜನೆಗಳು ಜಾರಿಯಲ್ಲಿದ್ದರೂ ಅನುಷ್ಠಾನಗೊಳಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪಾಧ್ಯಕ್ಷರಾದ ಸಂತು ಸುಬ್ರಮಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀವನ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಇದೇ ಸಂದರ್ಭ ಮೀನುಗಾರಿಕೆ ಇಲಾಖೆಯಲ್ಲಿ 2017-18 ಅರ್ಹ ಫಲಾನುಭವಿಗಳಿಗೆ ಮೀನುಗಾರಿಕೆ ಕಿಟ್ ವಿತರಿಸಲಾಯಿತು.







