ಚಿಕ್ಕಮಗಳೂರು; ಅಮೃತ್ ಯೋಜನೆ ಅನುಷ್ಠಾನ ವಿಳಂಬ : ಆರೋಪ
ನಗರಸಭೆ ಸದಸ್ಯರಿಂದ ಆಕ್ರೋಶ; ತ್ವರಿತ ಜಾರಿಗೆ ಆಗ್ರಹ

►ಕಸ ವಿಲೇವಾರಿ ಘಟಕಕ್ಕೆ ಎಸ್‍ಎಫ್‍ಸಿ ಹಣ ಬಳಕೆಗೆ ವಿರೊಧ
►ಕಾಮಗಾರಿಗಳಿಗೆ ವರ್ಕ್ ಆರ್ಡರ್ ನೀಡಲು ಡಿಸಿಗೆ ಒಕ್ಕೊರಲ ಮನವಿಗೆ ಸಲಹೆ
►ಇಂದಿರಾ ಕ್ಯಾಂಟಿನ್‍ಗೆ ನಗರಸಭೆ ಅನುದಾನಕ್ಕೆ ವಿರೋಧ
ಚಿಕ್ಕಮಗಳೂರು, ಮಾ.8: ನಗರದ ನಿವಾಸಿಗಳಿಗೆ ದಿನವಿಡಿ ನಿರಂತರ ನೀರು ಪೂರೈಕೆ ಮಾಡುವ ಉದ್ದೇಶದಿಂದ ಅಮೃತ್ ಯೋಜನೆಯಡಿ ಜಾರಿಗೊಳಿಸಲಾಗುತ್ತಿರುವ 124.87 ಲಕ್ಷ ರೂ. ವೆಚ್ಚದ ಮಹತ್ವಕಾಂಕ್ಷಿ ಯೋಜನೆಯ ಜಾರಿಯಲ್ಲಿ ಅಧಿಕಾರಿಗಳು ಹಾಗೂ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ಯೋಜನೆಯ ಎಸ್ಟಿಮೇಟ್ ಬದಲಾಯಿಸಿ ಸದಸ್ಯರಿಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ನಗರಸಭೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಗದ್ದಲ ಏರ್ಪಡಿಸಿದ ವಿದ್ಯಮಾನಕ್ಕೆ ನಗರಸಭೆ ಸಭಾಂಗಣ ಸಾಕ್ಷಿಯಾಗಿಯಿತು.
ನಗರಸಭೆ ಅಧ್ಯಕ್ಷೆ ಶಿಪ್ಲಾ ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆದ 2018-19ನೇ ಸಾಲಿನ ಎಸ್‍ಎಫ್‍ಸಿ ಅನುದಾನ ಮ,ತ್ತು 14ನೇ ಹಣಕಾಸು ಅನುದಾನದಡಿಯಲ್ಲಿ ಕ್ರಿಯಾಯೋಜನೆ ತಯಾರಿಸುವ ವಿಶೇಷ ಸಭೆಯ ಆರಂಭದಲ್ಲಿ ಅಮೃತ್ ಯೋಜನೆಯ ಗುತ್ತಿಗೆದಾರರು ಸಭೆಗೆ ಯೋಜನೆ ಅನುಷ್ಠಾನ ಸಂಬಂಧ ಸಭೆಗೆ ಮಾಹಿತಿ ನೀಡಲು ಮುಂದಾದಾಗ ಬಿಜೆಪಿ ಸದಸ್ಯರಾದ ಸುಧೀರ್, ಅನ್ವರ್, ಪುಷ್ಪರಾಜ್, ಅನ್ವರ್, ದೇವರಾಜ್, ಶ್ಯಾಮಲಾ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ತಮ್ಮಯ್ಯ ಮತ್ತಿತರರು ಮಧ್ಯೆ ಪ್ರವೇಶಿಸಿ ಕಾಮಗಾರಿ ಅನುಷ್ಠಾನಕ್ಕೆ ವಿಳಂಬ ಮಾಡಲಾಗುತ್ತಿದ್ದು, ಯೋಜನೆಯ ಎಸ್ಟಿಮೇಟ್ ಬದಲಾವಣೆ ಮಾಡಿರುವ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡದೇ ಕಾಮಗಾರಿ ನಿರ್ವಹಿಸಲಾಗುತ್ತಿದೆ, ದೂರ ಇಟ್ಟು, ಮಾಹಿತಿ ನೀಡದೇ ಕಾಮಗಾರಿ ನಿರ್ವಹಿಸಲಾತ್ತಿದೆ. ಮೊದಲು ಹೇಳಿದಂತೆ 22 ಲಕ್ಷ ಲೀ. ನೀರು ಸಂಗ್ರಹ ಸಾಮರ್ಥ್ಯದ ನೀರಿನ ಶುದ್ಧೀಕರಣ ಘಟಕವನ್ನು ಹೊಸದಾಗಿ ನಿರ್ಮಿಸದೇ ಹಳೆಯ ಘಟಕವನ್ನೇ ನವೀಕರಣಗೊಳಿಸಲು ಗುತ್ತಿಗೆದಾರರು ಮುಂದಾಗಿದ್ದಾರೆ. ಪೈಪ್‍ಲೈನ್ ಅಳವಡಿಕೆಗೆ ರಸ್ತೆಗಳನ್ನು ಅಗೆದು ಹಾಗಕಲಾಗುತ್ತಿದೆ. ಇದರಿಂದ ಸಾರ್ವಜನಿಕರು ನಗರಸಭೆ ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಹಳೆಯ ನೀರು ಪೂರೈಕೆ ಪಿಲ್ಟರ್‍ಬೆಡ್ (ನೀರು ಶುದ್ಧಿಕರಣ ಘಟಕ)ವನ್ನು ನವೀಕರಿಸಿದೇ ಮೊದಲು ಎಸ್ಟಿಮೇಟ್‍ನಲ್ಲಿ ತಿಳಿಸಿರುವಂತೆ ಹೊಸದಾಗಿ ನಿರ್ಮಿಸಬೇಕು. ಮನೆಗಳಿಗೆ ನೀರು ಪೂರೈಕೆಗಾಗಿ ರಸ್ತೆಯ ಒಂದೇ ಬದಿಯಲ್ಲಿ ಪೈಪ್‍ಲೈನ್ ಅಳವಡಿಸದೇ ಎರಡೂ ಬದಿಯಲ್ಲಿ ಅಳವಡಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಆಯುಕ್ತೆ, ಅಮೃತ್ ಯೋಜನೆಯಡಿ ಮೂರು ಹಂತಗಳಲ್ಲಿ ಕೈಗೊಳ್ಳಲಾಗುತ್ತಿರುವ ಈ ಯೋಜನೆನ್ನು ನಗರದ 1, 2, 3, 21, 22ನೇ ವಾರ್ಡುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಸಲಗುತ್ತಿದೆ. ಪಿಲ್ಟರ್‍ಬೆಡ್ ಅನ್ನು ಹೊಸದಾಗಿ ನಿರ್ಮಿಸುವ ಪ್ರಸ್ತಾಪ ಬಿಟ್ಟು ಹಳೆಯ ಘಟಕವನ್ನೇ ನವೀಕರಣ ಮಾಡಲು ಉದ್ದೇಶಿಸಲಾಗಿದೆ. ಐದು ವಾರ್ಡುಗಳಲ್ಲಿ ಕಾಮಗಾರಿ ಬಳಿಕ ರಸ್ತೆಗಳ ನಿರ್ವಹಣೆ ಸೇರಿದಯ ಎಲ್ಲ ನಿರ್ವಹಣೆಯನ್ನು ಗುತ್ತಿಗೆದಾರರೇ ಮಾಡಲಿದ್ದಾರೆಂದು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಕಾಂಗ್ರೆಸ್ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ಯೋಜನೆ ಜಾರಿ ಸಂಬಂಧ ಅಧಿಕಾರಿಗಳು ಹಾಗೂ ಇಲಾಖೆಯ ಇಂಜಿನಿಯರ್‍ಗಳು ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಸರಿಯಾದ ಮಾಹಿತಿ ನೀಡುತ್ತಿಲ್ಲ. ನನಗೆ ಈ ಯೋಜನೆಯ ಬಗ್ಗೆ ಮಾಹಿತಿ ಇಲ್ಲ. ಏನಾಗುತ್ತಿದೆ ಎಂದೂ ತಿಳಿಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಬಿಜೆಪಿ ಸದಸ್ಯರೂ ಧ್ವನಿ ಗೂಡಿಸಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ಬಳಿಕ ಸಭೆಯ ಚರ್ಚೆ ಎಸ್‍ಎಫ್‍ಸಿ ಅನುದಾನ ಹಾಗೂ 14ನೇ ಹಣಕಾಸು ಅನುದಾನದತ್ತ ತಿರುಗಿದಾಗ, ನಗರಸಭೆ ಮಜಿ ಅಧ್ಯಕ್ಷೆ ತಮ್ಮಯ್ಯ ಮಾತನಾಡಿ, ಇಂದಾವರದ ಕಸ ವಿಲೇವಾರಿ ಘಟಕದಲ್ಲಿ ಕಸ ವಿಂಗಡೆ ಸಮರ್ಪಕವಾಗಿ ಆಗದಿರುವುದರಿಂದ ಕಸವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಘಟಕವನ್ನು ವೈಜ್ಞಾನಿಕವಾಗಿ ನಿರ್ಮಿಸುವ ನಿಟ್ಟಿನಲ್ಲಿ ಎಸ್‍ಎಫ್‍ಸಿ ಅನುದಾನವನ್ನು ಬಳಸಬೇಕೆಂದರು. ಇದಕ್ಕೆ ಆಕೇಪ ವ್ಯಕ್ತಪಡಿಸಿದ ಪುಟ್ಟಸ್ವಾಮಿ, ಇಂದಾವರದ ಕಸ ವಿಲೇವಾರಿ ಘಟಕ ನಗರಸಭೆ ಪಾಲಿಗೆ ಬಿಳಿ ಆನೆಯಾಗಿದೆ. ಎಷ್ಟೇ ಅನುದಾನ ಸುರಿದರೂ ಅಲ್ಲಿನ ಸಮಸ್ಯೆ ಬಗೆಹರಿಯುತ್ತಿಲ್ಲ. ಈ ಅನುದಾನವನ್ನು ಅಲ್ಲಿಗೆ ಬಳಸಬಾರದು ಎಂದರು, ಈ ವೇಳೆ ಸುಧೀರ್ ಮಧ್ಯೆ ಪ್ರವೇಶಿಸಿ, ಎಸ್‍ಎಫ್‍ಸಿ ಅನುದಾನ ಬಳಸಿ ಮನೆಗಳಲ್ಲೇ ಕಸ ವಿಂಗಡಣೆ ಮಾಡುವುದುನ್ನು ಪ್ರಾಯೋಗಿಕವಾಗಿ ಕೆಲ ವಾರ್ಡ್‍ಗಳಲ್ಲಿ ಆರಂಭಿಸಬೇಕೆಂದರು. ಇನ್ನು ಕೆಲ ಸದಸ್ಯರು ಅನುದಾನವನ್ನು ಕಸ ವಿಲೇವಾರಿ ಘಟಕಕ್ಕೆ ಸುರಿಯದೇ ನಗರದ ಅಭಿವೃಧ್ಧಿಗೆ ಬಳಸಬೇಕೆಂದು ಒತ್ತಾಯಿಸಿದರು.
ನಂತರ ನಗರಸಭೆ ಅನುದಾಡಿಯಲ್ಲಿ ಟೆಂಡರ್ ಆಗಿರುವ ಕಾಮಗಾರಿಗಳಿಗೆ ವರ್ಕ್ ಆರ್ಡರ್ ನೀಡದ ಬಗ್ಗೆ ಚರ್ಚೆ ಹೊರಳಿತು. ಟೆಂಡರ್ ಆದ ಕಾಮಗಾರಿಗಳಿಗೆ ವರ್ಕ್ ಆರ್ಡರ್ ನೀಡಲು ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡುತ್ತಿಲ್ಲ ಎಂದು ಅಧ್ಯಕ್ಷೆ ಶಿಲ್ಲಾ ರಾಜಶೇಖರ್ ಸಭೆಯ ಗಮನ ಸೆಳೆದರು. ಚುನಾವಣೆ ಸಂದರ್ಭದಲ್ಲಿ ಅಗತ್ಯವಿರುವ ಕಾಮಗಾರಿಗಳಿಗೆ ಮಾತ್ರ ಟೆಂಡರ್ ಕರೆಯಲಾಗಿದೆ. ವರ್ಕ್ ಆರ್ಡರ್ ನೀಡಬೇಡಿ ಎಂದು ಡಿಸಿಗೆ ಯಾರೂ ಹೇಳಿಲ್ಲ, ಎಲ್ಲ ಸದಸ್ಯರು ಪಕ್ಷಬೇದ ಮರೆತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವರ್ಕ್ ಆರ್ಡರ್ ನೀಡಲು ಮನವಿ ಮಾಡಲು ಮುಂದಾಗಬೇಕೆಂದು ಹಿರೇಮಗಳೂರು ಪುಟ್ಟಸ್ವಾಮಿ ಸಲಹೆ ನೀಡಿದರು. ಇದಕ್ಕೆ ಉಳಿದ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ಇನ್ನು ಇಂದಿರಾ ಕ್ಯಾಂಟಿನ್‍ಗೆ ಎಸ್‍ಎಫ್‍ಸಿ ಹಣ ಬಳಕೆ ಸರಿಯಲ್ಲ, ಸರಕಾರ ಉಚಿತ ಊಟ, ತಿಂಡಿ ನೀಡುವ ಸಲುವಾಗಿ ನಗರಸಭೆಗಳಿಗೆ ನೀಡುತ್ತಿದ್ದ ಅನುದಾನದಲ್ಲಿ ಕಡಿತ ಮಾಡಿದೆ. ಸರಕಾರ ಇಂದಿರಾಕ್ಯಾಂಟಿನ್‍ಗೆ ಪ್ರತ್ಯೇಕ ವಿಶೇಷ ಅನುದಾನ ನೀಡಲಿ. ಆದರೆ ಎಸ್‍ಎಫ್‍ಸಿ ಅನುದಾನದಲ್ಲಿ ಕಡಿತ ಮಾಡಿರುವುದು ಸರಿಯಲ್ಲ. ಇದರಿಂದ ನಗರದಭಿವೃದ್ಧಿಗೆ ಅನುದಾನ ಸಾಲುತ್ತಿಲ್ಲ ಎಂದು ಸದಸ್ಯ ದೇವರಾಜ್ ಶೆಟ್ಟಿ ಸಭೆಗೆ ಮನವಿ ಮಾಡಿದರು.
ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರೂ ಸೇರಿದಂತೆ, ನಗರಸಭೆ ಇಂಜಿನಿಯರ್ ಗಳು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖಾಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.
ನಗರಸಭೆಯ ವಿಶೇಷ ಸಭೆಯಲ್ಲಿ ಎಸ್‍ಎಫ್‍ಸಿ ಅನುದಾನ ಹಾಗೂ 14ನೇ ಹಣಕಾಸು ಅನುದಾನದ ಬಗ್ಗೆ ಚರ್ಚೆ ನಿಗದಿಯಾಗಿತ್ತು. ಈ ಸಭೆಗೆ ಮಾಧ್ಯಮದವರನ್ನು ಆಹ್ವಾನಿಸಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಯಾವುದೇ ಪೂರ್ವ ಮಾಹಿತಿ ನೀಡದೇ ಅಮೃತ್ ಯೋಜನೆಯ ಬಗ್ಗೆ ಮಾಹಿತಿ ನೀಡಲು ನಗರಸಭೆ ಅಧ್ಯಕ್ಷೆ ಹಾಗೂ ಆಯುಕ್ತೆ ಗುತ್ತಿಗೆದಾರರಿಗೆ ಸೂಚಿಸಿದರು. ಅವರು ಮಾಹಿತಿ ನೀಡುತ್ತಿದ್ದಂತೆ ಬಿಜೆಪಿ ಸದಸ್ಯರೂ ಅವರೊಂದಿಗೆ ಚರ್ಚೆಗಿಳಿದರು. ಈ ಚರ್ಚೆ ಸುಮಾರು ಅರ್ದಗಮಟೆ ನಡೆದರೂ ಚರ್ಚೆಯ ವಿಷಯ ತಿಳಿಯದೇ ಮಾಧ್ಯಮದವರು ಸಭೆಯಲ್ಲಿ ಏನು ನಡೆಯುತ್ತಿದೆ ಎಂದು ಪೇಚಿಗೆ ಸಿಲುಕಿದರು. ಸದಸ್ಯರ ಮಾತಿನ ಬರದಲ್ಲಿ ಮಾಧ್ಯಮದವರ ಗೋಳಾಟ ಯಾರ ಅರಿವಿಗೂ ಬರಲಿಲ್ಲ. ಬಳಿಕ ಸದಸ್ಯರೊಬ್ಬರು ಚರ್ಚೆ ವಿಷಯ ಏನೆಂದು ನನಗೂ ತಿಳಿಯುತ್ತಿಲ್ಲ ಮೊದಲು ಈ ಬಗ್ಗೆ ಮೊದಲು ತಿಳಿಸಿ ಎಂದಾಗಷ್ಟೇ ಚರ್ಚೆಯ ವಿಷಯ ಅಮೃತ್ ಯೋಜನೆ ಎಂದು ತಿಳಿದು ಬಂತು.







