ಡಿವೈಎಸ್ಪಿ ಸೇರಿ 9 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು, ಮಾ.9: ಆದಾಯ ಮೀರಿ ಗಳಿಕೆ ಆರೋಪದಡಿ ಉಡುಪಿಯ ಅಬಕಾರಿ ಡಿವೈಎಸ್ಪಿ ವಿನೋದ್ ಕುಮಾರ್ ಸೇರಿದಂತೆ ಒಂಭತ್ತು ಅಧಿಕಾರಿಗಳ ವಿರುದ್ಧ ಬರೋಬ್ಬರಿ 36 ಸ್ಥಳಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.
ಬೆಂಗಳೂರು: ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್. ಗಂಗಾಧರ್ ಅವರ ನಂದಿನಿ ಬಡಾವಣೆಯಲ್ಲಿರುವ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ತನಿಖೆ ತಂಡ, ಆಸ್ತಿ, ಆದಾಯ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಕೆಜಿಐಡಿ ಎಸ್‌ಬಿ ಅಧೀಕ್ಷಕ ರುದ್ರಪ್ರಸಾದ್ ಅವರ ಮಲ್ಲತಹಳ್ಳಿ, ಬೆಂಗಳೂರಿನಲ್ಲಿರುವ ವಾಸದ ಮನೆ ಹಾಗೂ ಬನಶಂಕರಿ, ತುಮಕೂರಿನಲ್ಲಿರುವ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮನೆ ಮೇಲೆ ದಾಳಿ ನಡೆಸಲಾಯಿತು.
ಬೆಳಗಾವಿ: ಅಥಣಿಯ ಹಿಪ್ಪರಗಿ ಅಣೆಕಟ್ಟು ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ರಾಜಶ್ರೀ ಜೈನಾಪುರ ಅವರ ಬೆಳಗಾವಿ ಪಟ್ಟಣದಲ್ಲಿರುವ ವಾಸದ ಮನೆ ಸೇರಿ ಒಟ್ಟು 3 ಮನೆಗಳು, ಅಥಣಿಯಲ್ಲಿನ ಕಚೇರಿ, ಕೇಶವಾಪುರ, ಹುಬ್ಬಳ್ಳಿಯಲ್ಲಿರುವ ಇನ್ನೊಂದು ಮನೆ ಎಸಿಬಿ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ.
ಉಡುಪಿ: ಅಬಕಾರಿ ಡಿವೈಎಸ್ಪಿ ವಿನೋದ್‌ಕುಮಾರ್ ಅವರ ಮಂಗಳೂರು ನಗರದಲ್ಲಿರುವ ವಾಸದ ಮನೆ ಸೇರಿ ಎರಡು ಮನೆ, ಅಜ್ಜರಕಾಡು, ಉಡುಪಿಯಲ್ಲಿರುವ ಇವರ ಚಾಲಕನ ಮನೆ, ಕುಕ್ಕಂದೂರು ಮತ್ತು ಬಿಜೂರು(ಉಡುಪಿ ಜಿಲ್ಲೆ) ಮನೆಗಳು ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಯಿತು.
ಕೊಪ್ಪಳ: ಗಂಗಾವತಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸಹಾಯಕ ಕಾರ್ಯಪಾಲಕ ಅಭಿಯಂತರು ಪಿ.ವಿಜಯಕುಮಾರ್, ಅವರ ಕಚೇರಿ, ಬೆಂಗಳೂರಿನಲ್ಲಿರುವ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಕೋಲಾರ: ಶ್ರೀನಿವಾಸಪುರ ತಾಲೂಕಿನ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಸಹಾಯಕ ಅಭಿಯಂತರ ಎನ್.ಅಪ್ಪಿರೆಡ್ಡಿ ಅವರ ವಾಸ ಮನೆ ಹಾಗೂ ಪೌಲ್ಟ್ರಿ ಫಾರಂ ಮತ್ತು ವಡಗೆಪಲ್ಲಿಯಲ್ಲಿನ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ದಾಳಿ ನಡೆಸಲಾಯಿತು.
ರಾಮನಗರ: ಮಾಗಡಿ ತಾಲೂಕಿನ ವೈದ್ಯಕೀಯ ಅಧಿಕಾರಿ ಡಾ.ರಾಘುನಾಥ್ ಅವರ ಕುದೂರು ವಾಸದ ಮನೆ, ಖಾಸಗಿ ಕ್ಲೀನಿಕ್ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಪ್ರೈಮರಿ ಮೆಡಿಕಲ್ ಸೆಂಟರ್ ಮೇಲೂ ದಾಳಿ ನಡೆಸಿ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಚಿಕ್ಕಮಗಳೂರು: ಆರ್‌ಟಿಓ ಕಚೇರಿಯ ಎಸ್‌ಡಿಎ ಕೆ.ಸಿ.ವಿರುಪಾಕ್ಷ ಅವರ ಮನೆ ಹಾಗೂ ಕಚೇರಿ, ಹೊಳೆನರಸಿಪುರ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಅದೇ ರೀತಿ, ಕಡೂರು ಕೃಷಿ ಇಲಾಖೆ ಸಹಾಯ ನಿರ್ದೇಶಕ ಎ.ಪಿ.ಶಿವಕುಮಾರ್, ಅವರ ತಿಪಟೂರಿನ ಮನೆ ಸೇರಿ ಕರ್ತವ್ಯ ನಿರ್ವಹಿಸುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ರಾಜ್ಯದ ವಿವಿಧ ಕಡೆ ಎಸಿಬಿ ತಂಡಗಳಿಂದ ಸರಕಾರಿ ನೌಕರರ ವಿರುದ್ದ ದಾಳಿ ಮುಂದುವರೆದಿದ್ದು, ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರೆದಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.







