ಬಾಲಕಿಯ ಅತ್ಯಾಚಾರ ನಡೆಸಿದರೆ ಮರಣದಂಡನೆ: ರಾಜಸ್ತಾನ ಸರಕಾರದ ಮಸೂದೆ
ಜೈಪುರ, ಮಾ.9: 12 ವರ್ಷಕ್ಕಿಂತ ಕೆಳಹರೆಯದ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುವವರಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಮಸೂದೆಯನ್ನು ರಾಜಸ್ತಾನದ ವಿಧಾನಸಭೆ ಅನುಮೋದಿಸಿದೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಮಧ್ಯಪ್ರದೇಶ ಇಂತಹ ಮಸೂದೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೊಳಿಸಿದ್ದರೆ, ಕಳೆದ ತಿಂಗಳು ಹರ್ಯಾಣ ಸರಕಾರ ಈ ಮಸೂದೆ ಜಾರಿಗೊಳಿಸಿದೆ. ಇದೀಗ ರಾಜಸ್ತಾನ ವಿಧಾನಸಭೆಯಲ್ಲಿ ಕ್ರಿಮಿನಲ್ ಕಾಯ್ದೆ (ರಾಜಸ್ತಾನ ತಿದ್ದುಪಡಿ) ಮಸೂದೆ 2018ಕ್ಕೆ ಅನುಮೋದನೆ ದೊರೆತಿದೆ. ಈ ಪ್ರಕಾರ 12 ವರ್ಷಕ್ಕಿಂತ ಕೆಳಹರೆಯದ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುವವರಿಗೆ ಮರಣದಂಡನೆ ಅಥವಾ 14 ವರ್ಷಕ್ಕೆ ಕಡಿಮೆಯಿಲ್ಲದ ಕಠಿಣ ಜೈಲು ಶಿಕ್ಷೆ (ಜೀವಾವಧಿ ಶಿಕ್ಷೆಗೆ ವಿಸ್ತರಿಸಬಹುದು) ಹಾಗೂ ದಂಡವನ್ನು ವಿಧಿಸಲಾಗುತ್ತದೆ. ಇದೇ ರೀತಿ 376-ಡಿಡಿ ಪರಿಚ್ಛೇದದಡಿ ನಿಯಮವೊಂದನ್ನು ಸೇರಿಸಲಾಗಿದ್ದು, ಮಕ್ಕಳ ಮೇಲೆ ನಡೆಯುವ ಅತ್ಯಾಚಾರ , ಮಕ್ಕಳ ಮೇಲೆ ನಡೆಯುವ ಸಾಮೂಹಿಕ ಅತ್ಯಾಚಾರ ನಡೆಸುವವರಿಗೂ ಕಠಿಣ ಶಿಕ್ಷೆ ಘೋಷಿಸಲಾಗಿದೆ.
Next Story