ರಫೇಲ್ ಒಪ್ಪಂದದ ಮೂಲಕ ಭಾರೀ ಮೊತ್ತವನ್ನು ಜೇಬಿಗಿಳಿಸಿದ ಬಿಜೆಪಿ :ಕಾಂಗ್ರೆಸ್ ಆರೋಪ

ಹೊಸದಿಲ್ಲಿ, ಮಾ.9: ರಫೇಲ್ ಯುದ್ಧವಿಮಾನ ಒಪ್ಪಂದದ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್, ಮೋದಿ ಸರಕಾರ ರಾಷ್ಟ್ರದ ಹಿತಾಸಕ್ತಿಯ ವಿಷಯದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿದೆ. ಅಲ್ಲದೆ ಯುದ್ಧವಿಮಾನ ದ ಖರೀದಿಯ ಮೊತ್ತ ಬಹಿರಂಗಗೊಳಿಸದೆ ಬಿಜೆಪಿ ಈ ಒಪ್ಪಂದದಲ್ಲಿ ಭಾರೀ ಮೊತ್ತವನ್ನು ಜೇಬಿಗಿಳಿಸಿಕೊಂಡಿದೆ ಎಂದಿದೆ.
ರಫೆಲ್ ಯುದ್ಧವಿಮಾನಗಳಿಗೆ ಈಜಿಪ್ಟ್ ಮತ್ತು ಕತರ್ ದೇಶಗಳು ಪಾವತಿಸಿರುವ ಮೊತ್ತಕಿಂತ ಅಧಿಕ ಮೊತ್ತವನ್ನು ಭಾರತ ಪಾವತಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್, ಮೋದಿ ಸರಕಾರದ ಇರಾದೆ ಮತ್ತು ಉದ್ದೇಶ ಏನು ಎಂದು ಪಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುದ್ಧವಿಮಾನಗಳ ಖರೀದಿ ಮೊತ್ತವನ್ನು ಬಹಿರಂಗಗೊಳಿಸುವುದಾಗಿ ಹೇಳಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾತಿಗೆ ತಪ್ಪಿದ್ದಾರೆ ಎಂದು ದೂರಿದರು. ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ (12.12.2012ರಲ್ಲಿ ) ಒಂದು ರಫೇಲ್ ಯುದ್ಧವಿಮಾನದ ದರ 526.1 ಕೋಟಿ ರೂ. ಎಂದು ನಿಗದಿಯಾಗಿತ್ತು. ಆದರೆ ಮೋದಿ ಸರಕಾರ ಒಂದು ಯುದ್ಧವಿಮಾನಕ್ಕೆ 1,670.70 ಕೋಟಿ ರೂ. ಖರೀದಿ ದರ ನಿಗದಿಗೊಳಿಸಿದೆ ಎಂಬ ವರದಿ ಸತ್ಯವೇ ಎಂದು ಆಝಾದ್ ಪ್ರಶ್ನಿಸಿದರು. 2015ರ ಎಪ್ರಿಲ್ 10ರಂದು 26 ಯುದ್ಧವಿಮಾನಗಳ ಖರೀದಿ ಒಪ್ಪಂದವನ್ನು ಘೋಷಿಸುವಾಗ ಭದ್ರತೆಗಾಗಿನ ಸಂಪುಟ ಸಮಿತಿಯ ಅನುಮೋದನೆ ಯಾಕೆ ಪಡೆದಿಲ್ಲ . ತುರ್ತು ಅವಶ್ಯಕತೆಗಾಗಿ ರಫೇಲ್ ಯುದ್ಧವಿಮಾನ ಖರೀದಿಸಲಾಗಿದೆ ಎಂದು ಸರಕಾರ ತಿಳಿಸಿದೆ. ಆದರೆ ಇದುವರೆಗೆ ಒಂದೂ ಯುದ್ಧವಿಮಾನವನ್ನು ಯಾಕೆ ಖರೀದಿಸಿಲ್ಲ ಎಂದು ಆಝಾದ್ ಪ್ರಶ್ನಿಸಿದರು.





