ಸರಕಾರಿ ಹಾಸ್ಟೆಲ್‌ಗಳ ಬಿಜೆಪಿ ಸಮೀಕ್ಷಾ ವರದಿ ಬಿಡುಗಡೆ

ಉಡುಪಿ, ಮಾ. 9: ರಾಜ್ಯದ ಸರಕಾರಿ ಎಸ್‌ಸಿ ಎಸ್‌ಟಿ, ಹಿಂದುಳಿದ ವರ್ಗ, ಮಹಿಳಾ ಹಾಸ್ಟೆಲ್‌ಗಳು ಮತ್ತು ವಸತಿ ಶಾಲೆಗಳ ಅವ್ಯವಸ್ಥೆ ಕುರಿತು ರಾಜ್ಯ ಬಿಜೆಪಿ ನಡೆಸಿದ ಸಮೀಕ್ಷಾ ವರದಿಯನ್ನು ಇಂದು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ರಾಜ್ಯದ ಎಲ್ಲ ಜಿಲ್ಲೆಗಳ ಒಟ್ಟು 1080 ಎಸ್‌ಸಿ-ಎಸ್‌ಟಿ, 1510 ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳನ್ನು ಸಂದರ್ಶಿಸಿ ರೂಪಿಸಿರುವ ಈ ಸಮೀಕ್ಷೆಯಲ್ಲಿ ಹಾಸ್ಟೆಲ್‌ಗಳ ನರಕ ಸದೃಶ್ಯ ಸಂಗತಿಗಳು ಬಯಲಾಗಿದ್ದು, ಕಾಂಗ್ರೆಸ್ ಸರಕಾರವು ದಮನಿತರ ಬಗ್ಗೆ ತೋರುತ್ತಿರುವ ಅಲಕ್ಷಕ್ಕೆ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.
ರಾಜ್ಯದ 377 ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳೇ ಇಲ್ಲ. 381 ಹಾಸ್ಟೆಲ್‌ಗಳಲ್ಲಿ ಶೌಚಾಲಯಗಳು ಸರಿಯಾಗಿಲ್ಲ. 565 ಹಾಸ್ಟೆಲ್‌ಗಳು ವಾಸಯೋಗ್ಯವಾಗಿಲ್ಲ. 331 ಹಾಸ್ಟೆಲ್‌ಗಳಲ್ಲಿ ಉಗ್ರಾಣಗಳಿಲ್ಲ, 336 ಹಾಸ್ಟೆಲ್‌ಗಳಲ್ಲಿ ಸ್ನಾನಗೃಹಗಳು ಸರಿಯಾಗಿಲ್ಲ. 498ರಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದು ಈ ಸಮೀಕ್ಷೆಯಿಂದ ಕಂಡುಬಂದಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಎಸ್‌ಸಿ ಮೋರ್ಚಾದ ಅಧ್ಯಕ್ಷ ಹೇಮಂತ್ ಕುಮಾರ್, ಎಸ್‌ಟಿ ಮೋರ್ಚಾದ ಅಧ್ಯಕ್ಷ ದಿನೇಶ್ ನಾಯ್ಕೆ, ಪ್ರಭಾಕರ ಪೂಜಾರಿ, ಕಟಪಾಡಿ ಶಂಕರ ಪೂಜಾರಿ, ಸಂಧ್ಯಾ ರಮೇಶ್, ಬಿ.ಎಲ್.ಶಂಕರ ಪೂಜಾರಿ ಉಪಸ್ಥಿತರಿದ್ದರು.