ಗಂಗಾವತಿ: ಜಿ.ಪಂ.ಎಇಇ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ
ಅಪಾರ ಪ್ರಮಾಣದ ಚಿನ್ನ, ನಗದು - ಕಡತಗಳು ವಶ

ಗಂಗಾವತಿ, ಮಾ. 9: ಸ್ಥಳೀಯ ಜಯನಗರದಲ್ಲಿರುವ ಜಿ.ಪಂ. ಎಇಇ ಮತ್ತು ಕುಡಿಯುವ ನೀರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ವಿಜಯಕುಮಾರ ಅವರ ಗಂಗಾವತಿ, ಬೆಂಗಳೂರು ನಿವಾಸ ಹಾಗೂ ಕಚೇರಿ ಸೇರಿ ಐದು ಕಡೆ ಎಸಿಬಿ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನ, ನಗದು ಮತ್ತು ಕಡತಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಜಯನಗರದಲ್ಲಿರುವ ಮನೆ, ನಗರಸಭೆ ಹತ್ತಿರ ಇರುವ ಜಿ.ಪಂ.ರಾಜ್ಯ ಇಲಾಖೆ ಕಚೇರಿ, ಆನೆಗೊಂದಿ ರಸ್ತೆಯಲ್ಲಿರುವ ಕುಡಿಯುವ ನೀರಿನ ಕಾಮಗಾರಿ ವಿಭಾಗದ ಕಚೇರಿ, ಬೆಂಗಳೂರಿನ ಕತ್ರಿಗುಪ್ಪೆಯ ಕಾವೇರಿನಗರದಲ್ಲಿರುವ ನಿವಾಸದ ಮೇಲೆ ಎಸಿಬಿ ಪೋಲಿಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆ 5:45ರ ಸುಮಾರಿನಲ್ಲಿ ಆರ್.ವಿಜಯಕುಮಾರ ವಾಯುವಿಹಾರಕ್ಕೆ ತೆರಳುವ ಸಂದರ್ಭ ಎಸಿಬಿ ಪೊಲೀಸರು ಆಗಮಿಸಿ ತಮ್ಮ ನಿವಾಸದ ಮೇಲೆ ದಾಳಿ ನಡೆಸಲಾಗುತ್ತದೆ. ಸಹಕಾರಿಸುವಂತೆ ಸೂಚಿಸಿ ವಿಜಯಕುಮಾರ ಇವರನ್ನು ಅವರ ಮನೆಗೆ ಕರೆತಂದು ವಿಚಾರಣೆ ಮತ್ತು ಕಡತಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಜಯನಗರದ ನಿವಾಸದಲ್ಲಿ ಕಚೇರಿಯ ಬಹುತೇಕ ಕಡತಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಅಕ್ರಮ ಆಸ್ತಿ ಕುರಿತು ಶೋಧ ನಡೆಯುತ್ತಿದೆ. ಶುಕ್ರವಾರ ಸಂಜೆ ವೇಳೆ ಜಯನಗರದಲ್ಲಿರುವ ಮನೆಯ ಐದು ಕೊಠಡಿಗಳ ಪೈಕಿ ಮೂರನ್ನು ಪರಿಶೀಲನೆ ನಡೆಸಲಾಗಿದೆ. ಅವರ ಆಪ್ತ ಯೇಸುದಾಸ ನಿವಾಸದಲ್ಲಿ ಸುಮಾರು.1.5 ಕೆಜಿ ಚಿನ್ನ, ನಗದು ಮತ್ತು ಬೆಂಗಳೂರಿನಲ್ಲಿ ವಿಜಯಕುಮಾರ ಹೆಸರಿನಲ್ಲಿರುವ ಎರಡು ಅಪಾರ್ಟ್ ಮೆಂಟ್, ಗಂಗಾವತಿ ತಾಲೂಕಿನ ಹೇಮಗುಡ್ಡದ ಹತ್ತಿರ 4.5 ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳಿದ್ದು, ದಾಳಿ ಇನ್ನೂ ಸಹ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಬಳ್ಳಾರಿ ವಲಯ ಎಸ್ಪಿ ಪ್ರಸನ್ನ ದೇಸಾಯಿ, ರಾಯಚೂರು ಡಿಎಸ್ಪಿ ಶ್ರೀಧರದೊಡ್ಡಿ, ಕೊಪ್ಪಳ ಡಿಎಸ್ಪಿ ಎಸ್.ಬಿ.ಗಿರೀಶ, ಸಿಪಿಐಗಳಾದ ರುದ್ರೇಶ ಉಜ್ಜನಕೊಪ್ಪ, ವಿಶ್ವನಾಥ ಕುಲಕರ್ಣಿ, ರವಿರಾಜ್ ಸೇರಿ 30ಕ್ಕೂ ಅಧಿಕ ಅಧಿಕಾರಿಗಳು, ಪೊಲೀಸರು ದಾಳಿಯಲ್ಲಿದ್ದರು.







