ತಜ್ಞರ ಸಮಿತಿ ವರದಿಗೆ ಸಚಿವ ಸಂಪುಟದಲ್ಲಿ ನನ್ನ ಅಭಿಪ್ರಾಯ ತಿಳಿಸುವೆ: ಸಚಿವ ಖಂಡ್ರೆ
ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ

ಕಾಪು, ಮಾ. 9: ಲಿಂಗಾಯತ-ವೀರಶೈವಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕುರಿತಂತೆ ತಜ್ಞರ ಸಮಿತಿ ನೀಡಿರುವ ವರದಿಗೆ ತನ್ನ ಅಭಿಪ್ರಾಯ ಹಾಗೂ ಆ ಬಗ್ಗೆ ಏನು ಹೇಳಬೇಕೋ ಅದನ್ನು ಸಚಿವ ಸಂಪುಟದ ಸಭೆಯಲ್ಲೇ ಹೇಳುತ್ತೇನೆ. ಅದರ ಬಗ್ಗೆ ಇಲ್ಲಿ ಬಹಿರಂಗವಾಗಿ ಚರ್ಚಿಸಲು ನಾನು ಇಚ್ಛಿಸುವುದಿಲ್ಲ ಎಂದು ರಾಜ್ಯ ಪೌರಾಡಳಿತ ಸಚಿವ ಈಶ್ವರ ಬಿ.ಖಂಡ್ರೆ ಸ್ಪಷ್ಟವಾಗಿ ನುಡಿದರು.
ಕಾಪು ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ, ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸುತಿದ್ದರು.
ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ತಜ್ಞರ ಸಮಿತಿ ಸಲ್ಲಿಸಿರುವ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಬೇಕು. ಒಂದು ವೇಳೆ ಸರಕಾರ ಅದನ್ನು ಒಪ್ಪಿದರೆ ಧರ್ಮಯುದ್ಧ ಸಾರಬೇಕಾಗುತ್ತದೆ ಎಂಬ ರಾಷ್ಟ್ರೀಯ ಮಠಾಧೀಶರ ಪರಿಷತ್‌ನ ಎಚ್ಚರಿಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸಚಿವ ಖಂಡ್ರೆ ಸ್ಪಷ್ಟವಾಗಿ ನಿರಾಕರಿಸಿದರು. ಅವರೆಲ್ಲರೂ ಹಿರಿಯ ಸ್ವಾಮೀಜಿಗಳಾಗಿದ್ದು ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾರೆ ಎಂದರು.
ಈ ವಿಷಯದ ಕುರಿತು ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯ ಅಖಿಲ ಭಾರತ ವೀರಶೈವ ಮಹಾಸಭಾದ - ಲಿಂಗಾಯತ- ವೀರಶೈವ ಎರಡೂ ಒಂದೇ- ಎಂಬ ನಿಲುವೇ ನನ್ನ ನಿಲುವೂ ಆಗಿದೆ. ಅದಕ್ಕೆ ಈಗಲೂ ಬದ್ಧನಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಯಾಗಿರುವ ಸಚಿವರು ನುಡಿದರು.
ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಮಹಾಸಭಾವೇ 1979ರಲ್ಲಿ ಸರಕಾರಕ್ಕೆ ಪ್ರಸ್ತಾವ-ಅರ್ಜಿ ಸಲ್ಲಿಸಿತ್ತು. ವೀರಶೈವ- ಲಿಂಗಾಯತವನ್ನು ಸ್ವತಂತ್ರ-ಪ್ರತ್ಯೇಕ ಧರ್ಮ ಎಂದು ಪರಿಗಣಿಸಿ ರಾಷ್ಟ್ರ ಮಟ್ಟದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು ಎಂದವರು ನೆನಪಿಸಿಕೊಂಡರು.
ಆದರೆ ಈಗ ತಜ್ಞರ ಸಮಿತಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಮಾಡಿರುವ ಶಿಫಾರಸ್ಸಿನ ಕುರಿತು ಏನನ್ನೂ ಹೇಳಲು ಅವರು ನಿರಾಕರಿಸಿದರು. ನನ್ನ ಅಭಿಪ್ರಾಯವನ್ನು ಸಚಿವ ಸಂಪುಟದ ಸಭೆಯಲ್ಲಷ್ಟೇ ಹೇಳುತ್ತೇನೆ ಎಂದ ಖಂಡ್ರೆ, ನೀವು ಎಷ್ಟೇ ಪ್ರಯತ್ನಿಸಿದರೂ ನನ್ನಿಂದ ವಿವಾದಾ ತ್ಮಕ ಹೇಳಿಕೆಯನ್ನು ಹೊರಡಿಸಲಾರಿರಿ ಎಂದು ಪದೇ ಪದೇ ಪ್ರಶ್ನಿಸಿದ ಪತ್ರಕರ್ತರನ್ನು ಛೇಡಿಸಿದರು.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ತಜ್ಞರ ಸಮಿತಿ ಕಳೆದ ಶುಕ್ರವಾರ ತನ್ನ ವರದಿಯನ್ನು ಸರಕಾರಕ್ಕೆ ನೀಡಿತ್ತು. ಸಮಿತಿಯಲ್ಲಿ ಮುಝಾಫರ್ ಅಸ್ಸಾದಿ, ಪುರುಷೋತ್ತಮ ಬಿಳಿಮಲೆ, ಸಿ.ಎಸ್.ದ್ವಾರಕನಾಥ್, ಎಸ್.ಜಿ.ಸಿದ್ಧರಾಮಯ್ಯ ಮುಂತಾದವರು ಸದಸ್ಯರಾಗಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾ ಮೂರು ದಶಕಗಳ ಹಿಂದೆಯೇ ವೀರಶೈವ-ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡಬೇಕೆಂದು ಒತ್ತಾಯಿ ಸಿದ್ದರೆ, ಎಸ್.ಎಂ.ಜಾಮದಾರ ನೇತೃತ್ವದ ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳು ಲಿಂಗಾಯತಕ್ಕೆ ಮಾತ್ರ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.







