ಜನರನ್ನು ಒಗ್ಗೂಡಿಸುವವರೇ ನಿಜವಾದ ಆಧ್ಯಾತ್ಮಿಕ ಗುರು: ಕಾಯ್ಕಿಣಿ

ಉಡುಪಿ, ಮಾ.9: ಜನರನ್ನು ಒಟ್ಟು ಸೇರಿಸುವವರೇ ನಿಜವಾದ ಆಧ್ಯಾತ್ಮಿಕ ಗುರು. ಜನರನ್ನು ಒಡೆಯುವವರು ಗುರು ಆಗಲು ಸಾಧ್ಯವಿಲ್ಲ. ಈ ರೀತಿ ಜನರನ್ನು ಒಟ್ಟು ಸೇರಿಸುವುದರಲ್ಲಿ ಮಣಿಪಾಲ ಹೆರಿಟೇಜ್ ವಿಲೇಜ್‌ನ ಸಂಸ್ಥಾಪಕ ವಿಜಯನಾಥ್ ಶೆಣೈ ಅವರಿಗೆ ಬಹಳ ಆಸಕ್ತಿ. ಇದುವೇ ಇಂದಿನ ನಿಜ ವಾದ ಆಧ್ಯಾತ್ಮಿಕತೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯ ಪಟ್ಟಿದ್ದಾರೆ.
ವಿಜಯನಾಥ್ ಶೆಣೈ ಅವರ ಪ್ರಥಮ ಪುಣ್ಯತಿಥಿ ಪ್ರಯುಕ್ತ ಮಣಿಪಾಲದ ಹೆರಿಟೇಜ್ ವಿಲೇಜ್‌ನಲ್ಲಿ ಶುಕ್ರವಾರ ಆಯೋಜಿಸಲಾದ ಶೆಣೈ ಸ್ಮಾರಕ ಉಪನ್ಯಾಸ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
ವಿಜಯನಾಥ್ ಶೆಣೈ ಅವರ ಸಂಸ್ಕೃತಿ ಗ್ರಾಮದಲ್ಲಿರುವ ಆಕೃತಿಗಳು ಮನುಷ್ಯ ರಂತೆ ಮಾತನಾಡುತ್ತವೆ. ವಿಜಯನಾಥ್ ಶೆಣೈಗೆ ಸ್ಥಾವರ ಜೊತೆಗಿನ ಜಂಗಮ ದಲ್ಲಿ ಆಸಕ್ತಿ ಇತ್ತು. ದಾರುಶಿಲ್ಪಕ್ಕೆ ಹೆಚ್ಚು ಒತ್ತು ನೀಡಿದ್ದರು. ಅವರ ಪ್ರಕಾರ ಸಂಸ್ಕೃತಿ ಅಂದರೆ ಪವಿತ್ರವಾದ ಬುದ್ದಿ, ಬಹುಮುಖಿ ಚಿಂತನೆ ಎಂದರು.
ವಿಜಯನಾಥ್ ಶೆಣೈ ಸಂಸ್ಕೃತಿ ಗ್ರಾಮವನ್ನು ಧೂಳು, ಭಯದಿಂದ ಕೂಡಿದ ಮ್ಯೂಸಿಯಂ ರೀತಿಯಲ್ಲಿ ಮಾಡದೆ ಎಲ್ಲ ರೀತಿಯ ಹೂವುಗಳು ಅರಳುವ, ಮರಗಳು ಚಿಗುರುವ ಉದ್ಯಾನವನದಂತೆ ರೂಪಿಸಿದರು. ಹಾಗಾಗಿ ಇದು ಬೆಳೆಯುತ್ತಲೇ ಇದೆ ಮತ್ತು ಜಂಗಮ ಧ್ವನಿ ಅನುರಣಿಸುತ್ತಲೇ ಇದೆ ಎಂದು ಅವರು ತಿಳಿಸಿದರು.
ವಿಶ್ರಾಂತಿ ಇಲ್ಲದೆ ಕಾರ್ಯ ನಿರ್ವಹಿಸುವಂತಹ ದೊಡ್ಡ ಕೊಡುಗೆಯನ್ನು ವಿಜಯನಾಥ್ ಶೆಣೈ ಈ ಸಮಾಜಕ್ಕೆ ನೀಡಿದ್ದಾರೆ. ಹೊಸ ಜನಾಂಗಕ್ಕೆ ಸಂಸ್ಕೃತಿ ಯನ್ನು ಧಾರೆ ಎರೆದಿದ್ದಾರೆ. ಎಲ್ಲರಿಗೂ ಜೀವ ಪೋಷಕವಾದ ಮೌಲ್ಯವನ್ನು ಕೊಟ್ಟಿರುವ ಮಹಾನ್ ವ್ಯಕ್ತಿ ಅವರು ಎಂದು ಜಯಂತ್ ಕಾಯ್ಕಿಣಿ ಹೇಳಿದರು. ಟ್ರಸ್ಟಿ ಧನ್ವಂತರಿ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







