ಮಂಗಳೂರು: ಶಾಲಾ ಪರೀಕ್ಷಾ ವೇಳಾಪಟ್ಟಿ ಬದಲಾವಣೆ
ಮಂಗಳೂರು, ಮಾ.9: ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕರ್ತವ್ಯದ ದಿನಗಳು ಎಪ್ರಿಲ್ 10 ರವರೆಗೆ ಸದುಪಯೋಗವಾಗಬೇಕಿದ್ದು, ಶಾಲಾ ಕರ್ತವ್ಯದ ದಿನಗಳನ್ನು ಸಮರ್ಪಕವಾಗಿ ಬಳಸಿಕೊಂಡು 1 ರಿಂದ 9ನೆ ತರಗತಿಗಳ ಪರೀಕ್ಷೆಗಳನ್ನು ನಡೆಸಲು ಮಾ.21 ರಿಂದ ಎಪ್ರಿಲ್ 7 ರೊಳಗೆ ಕ್ರಮ ವಸುವಂತೆ ಸೂಚಿಸಲಾಗಿದೆ.
ಆದರೆ ಮಾ.23 ರಿಂದ ಎಪ್ರಿಲ್ 6 ರರವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯುವುದರಿಂದ ಪರೀಕ್ಷಾ ಕೇಂದ್ರಗಳಿರುವ ಸಂಸ್ಥೆಗಳಲ್ಲಿ ಇತರ ತರಗತಿಗಳ ಪರೀಕ್ಷೆಗಳನ್ನು ನಡೆಸುವುದು ಸಾಧ್ಯವಾಗುವುದಿಲ್ಲವೆಂದು ಮನವಿಗಳು ಸಲ್ಲಿಕೆಯಾಗಿವೆ.
ಈ ಹಿನ್ನೆಲೆಯಲ್ಲಿ ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಿರುವ ಶಾಲೆಗಳಿಗೆ ಮಾತ್ರ ಆದೇಶದಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದ್ದು, ಜಿಲ್ಲೆಯ 94 ಶಾಲೆಗಳಿಗೆ ಪರೀಕ್ಷಾ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಅನಿವಾರ್ಯ ಸಂದರ್ಭಗಳಲ್ಲಿ ಶಾಲಾ ಹಂತದಲ್ಲಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾದಲ್ಲಿ ಮುಖ್ಯ ಶಿಕ್ಷಕರು ಬದಲಾವಣೆ ಮಾಡಿಕೊಂಡು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮೋದನೆ ಪಡೆದುಕೊಳ್ಳಬೇಕು ಎಂದು ಡಿಡಿಪಿಐ ಪ್ರಕಟನೆ ತಿಳಿಸಿದೆ.





