ಮೊಹಾಲಿಯಲ್ಲಿ ಪ್ಯಾಡ್ ಬ್ಯಾಂಕ್ ಕಾರ್ಯಾರಂಭ

ಅಮೃತಸರ, ಮಾ.9: ಪಂಜಾಬಿನ ಮೊಹಾಲಿಯ ಸೆಕ್ಟರ್ 76ರ ಆಡಳಿತ ಕಟ್ಟಡದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಬ್ಯಾಂಕ್ ಕಾರ್ಯಾರಂಭ ಮಾಡಿದ್ದು ಈ ಪ್ರದೇಶದಲ್ಲಿ ಇದು ಪ್ರಥಮ ಪ್ಯಾಡ್‌ಬ್ಯಾಂಕ್ ಆಗಿದೆ. ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಸಬ್ಸಿಡಿ ದರದಲ್ಲಿ ನ್ಯಾಪ್‌ಕಿನ್ ಒದಗಿಸುವ ಯೋಜನೆಯ ಅಂಗವಾಗಿ ಪ್ಯಾಡ್‌ಬ್ಯಾಂಕ್ ತೆರೆಯಲಾಗಿದೆ.
ಶಾಲಾ ಬಾಲಕಿಯರಿಗೆ ಆರು ಪ್ಯಾಡ್‌ಗಳನ್ನು ಕೇವಲ 8 ರೂ. ದರದಲ್ಲಿ ಒದಗಿಸುವ ಈ ಯೋಜನೆಯಲ್ಲಿ ಜಿಲ್ಲಾಡಳಿತದ ಜೊತೆ ಖಾಸಗಿ ಸಂಸ್ಥೆಯೊಂದು ಕೈಜೋಡಿಸಿದೆ. ಯೋಜನೆಗೆ ಚಾಲನೆ ನೀಡಿದ ಮಾಜಿ ಕೇಂದ್ರ ಸಚಿವೆ ಪ್ರಣೀತ್ ಕೌರ್, ಬಡ ಹುಡುಗಿಯರು ಹಾಗೂ ಮಹಿಳೆಯರು ಮುಟ್ಟಾಗುವ ಸಂದರ್ಭ ಪ್ಯಾಡ್ ಬಳಸದಿದ್ದರೆ ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಹೊಂದಿರುವುದಿಲ್ಲ. ಮಹಿಳೆಯರು ತಮ್ಮ ದೇಹವನ್ನು ಸ್ವಚ್ಛವಾಗಿರಿಸಿಕೊಂಡರೆ ಖಾಯಿಲೆಯನ್ನು ದೂರಗೊಳಿಸಬಹುದು ಎಂದರು.
ಸರಕಾರಿ ಶಾಲೆಗಳಿಂದ ಆರಂಭಿಸುವ ಈ ಅಭಿಯಾನವನ್ನು ಸಮಾಜದ ತಳಮಟ್ಟದವರೆಗೂ ವಿಸ್ತರಿಸಲಾಗುತ್ತದೆ ಎಂದು ಹೆಚ್ಚುವರಿ ಉಪ ಆಯುಕ್ತ ಚರಣ್‌ದೇವ್ ಸಿಂಗ್ ಮಾನ್ ಮಾನ್ ಹೇಳಿದರು. ಜಿಲ್ಲಾಡಳಿತದ ಕಟ್ಟಡದಲ್ಲಿ ಇರಿಸಲಾಗಿರುವ ಪೆಟ್ಟಿಗೆಯಲ್ಲಿ ಸಾರ್ವಜನಿಕರು ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಡುಗೆಯಾಗಿ ನೀಡಬಹುದು ಎಂದವರು ಹೇಳಿದರು.
ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರಝಿಯಾ ಸುಲ್ತಾನ, ಶಿಕ್ಷಣ ಸಚಿವೆ ಅರುಣಾ ಚೌಧರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







