ಶೌಚಾಲಯವಿದ್ದರೂ ಬಳಕೆಗೆ ನೀರಿಲ್ಲ : ಸ್ಮಾರ್ಟ್‍ಸಿಟಿಯಲ್ಲಿ ಹಳ್ಳ ಹಿಡಿದ ಸ್ವಚ್ಚಭಾರತ್ ಅಭಿಯಾನ
ತುಮಕೂರು,ಮಾ.9:ಲಕ್ಷಾಂತರ ರೂ ಖರ್ಚು ಮಾಡಿ ಶಾಲಾ ಮಕ್ಕಳಿಗಾಗಿ ನಿರ್ಮಿಸಿರುವ ಶೌಚಾಲಯಕ್ಕೆ ನೀರಿನ ಸಂಪರ್ಕವಿಲ್ಲದೆ, ಸ್ವಚ್ಚಭಾರತ ಅಭಿಯಾನ ಸ್ಮಾರ್ಟ್‍ಸಿಟಿಯಾಗಿರುವ ತುಮಕೂರು ನಗರದಲ್ಲಿಯೇ ಹಳ್ಳ ಹಿಡಿದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ತುಮಕೂರು ನಗರದ ಎನ್.ಆರ್.ಕಾಲೋನಿಯ ಬೆಳಗುಂಬ ರಸ್ತೆಯಿಂದ ಅಣ್ಣೇತೋಟಕ್ಕೆ ಹೋಗುವ ರಸ್ತೆಯಲ್ಲಿ ಜೆ.ಪಿ.ಹಿರಿಯ ಪ್ರಾಥಮಿಕ ಶಾಲೆಯಿದೆ. ಎನ್.ಆರ್.ಕಾಲೋನಿ, ಬೆಳಗುಂಬ, ಅಣ್ಣೇತೋಟ, ಅಂಬೇಡ್ಕರ್ ನಗರ, ಶಾರದಾದೇವಿ ನಗರ ಹಾಗೂ ಸುತ್ತ ಮುತ್ತಲ ಸಮಾರು 250ಕ್ಕೂ ಹೆಚ್ಚು ಮಕ್ಕಳು ಸದರಿ ಶಾಲೆಯಲ್ಲಿ ಕಲಿಯುತ್ತಿದ್ದು, ಇದುವರೆಗೂ ಈ ಮಕ್ಕಳು ಶಾಲಾ ಸಿಬ್ಬಂದಿ ಮತ್ತು ಮಕ್ಕಳಿಗಾಗಿ ಇದ್ದ ಏಕೈಕ ಶೌಚಾಲಯವನ್ನೇ ಉಪಯೋಗಿಸುತ್ತಿದ್ದರು.ಇದಕ್ಕೆ ಬೇಕಾದ ನೀರನ್ನು ಶಾಲೆಯ ಆವರಣದಲ್ಲಿ ಇರುವ ತೊಟ್ಟಿಯಿಂದ ತೆಗೆದುಕೊಂಡು ಹೋಗಬೇಕಾಗಿತ್ತು. ಮಧ್ಯಾಹ್ನ ಬಿಸಿಯೂಟಕ್ಕೂ, ಶೌಚಾಲಯಕ್ಕೂ ಒಂದೇ ನೀರನ್ನು ಬಳಸುತ್ತಿದ್ದು, ಒಂದು ರೀತಿಯ ಆನಾರೋಗ್ಯಕರ ವಾತಾವರಣಕ್ಕೆ ಕಾರಣವಾಗಿತ್ತು.
ಶಾಲೆಯಲ್ಲಿ ಶೌಚಾಲಯದ ಸಮಸ್ಯೆ ಇರುವುದನ್ನು ಮನಗಂಡ ತುಮಕೂರು ನಗರ ಶಾಸಕರಾದ ಡಾ.ರಫೀಕ್ ಅಹಮದ್ ತಮ್ಮ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಶಾಲೆಗೆ ಹೊಸದಾಗಿ 3 ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಆದರೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ಹೊಸದಾಗಿ ನಿರ್ಮಾಣವಾದ ಶೌಚಾಲಯಗಳು ಬಳಕೆಗೆ ಬಾರದಂತಾಗಿವೆ. ಈ ಬಗ್ಗೆ ನಗರಪಾಲಿಕೆಯ ವಾರ್ಡಿನ ಕೌನ್ಸಿಲರ್, ಅಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಮಹಾನಗರ ಪಾಲಿಕೆಯ 19ನೇ ವಾರ್ಡ್‍ನಲ್ಲಿರುವ ಈ ಶಾಲೆಗೆ ಬರುವುದು ಬಹುತೇಕ ಕೊಳಗೇರಿಯ ಮಕ್ಕಳೇ, ಪ್ರೌಢಶಾಲಾ ವಿಭಾಗದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ 150 ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.ಮಕ್ಕಳ ಅಪೌಷ್ಠಿಕತೆಗೆ ಕಾರಣಗಳಲ್ಲಿ ಬಯಲು ಶೌಚಾಲಯ ಸಮಸ್ಯೆಯೇ ಮುಖ್ಯವಾಗಿದ್ದು, ಇರುವ ಒಂದು ಶೌಚಾಲಯವನ್ನು ಬಳಸಲು ಮಕ್ಕಳು ಸರದಿ ನಿಲ್ಲಬೇಕಾಗಿದೆ. ಪ್ರಾಥಮಿಕ ಶಾಲೆಯ ಮಕ್ಕಳು ಬಯಲನ್ನು ಆಶ್ರಯಿಸಿದ್ದರೆ, ಪ್ರೌಢಶಾಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಇರುವ ಒಂದು ಶೌಚಾಲಯವನ್ನು ಬಳಸಲು ಆಗುತ್ತಿಲ್ಲ, ಇನ್ನೂ ಹೊಸದಾಗಿ ನಿರ್ಮಾಣಗೊಂಡಿರುವ ಶೌಚಾಲಯವೂ ಉದ್ಘಾಟನೆಯಾಗುತ್ತಿಲ್ಲ.
ನೀರಿನದ್ದೇ ದೊಡ್ಡ ಸಮಸ್ಯೆ: ಅಣ್ಣೇತೋಟಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿಯೇ ಇರುವ ಜೆಪಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿರುವ ಶೌಚಾಲಯಗಳಿಗೆ ನೀರಿನ ಪೈಪ್‍ಲೈನ್ ವ್ಯವಸ್ಥೆ ಇಲ್ಲ, ತೊಟ್ಟಿಯಲ್ಲಿನ ನೀರನ್ನೇ ಶೌಚಾಲಯಕ್ಕೂ, ಬಿಸಿಯೂಟಕ್ಕೂ ಬಳಸಲಾಗುತ್ತಿದೆ. ಶೌಚಾಲಯಗಳಿಗೆ ನೀರಿನ ಸಂಪರ್ಕ ಕಲ್ಪಿಸುವಂತೆ ಪಾಲಿಕೆ ಸಿಬ್ಬಂದಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ನಾಗರೀಕರು.
ಮುಖ್ಯ ರಸ್ತೆಯಲ್ಲಿರುವ ಪೈಪ್ ಸಂಪರ್ಕದಿಂದ ಶೌಚಾಲಯದವರೆಗೂ ನೀರಿನ ಪೈಪ್ ಅಳವಡಿಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬಹುದಾಗಿದೆ.ಇದರಿಂದ ಮಕ್ಕಳು ತೊಟ್ಟಿಯಿಂದ ನೀರನ್ನು ತೆಗೆದುಕೊಂಡು ಶೌಚಾಲಯಕ್ಕೆ ಹೋಗುವುದು ತಪ್ಪುತ್ತದೆ.ಈ ಹಿಂದೆ ಸದಸ್ಯರಾದ ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದಾಗ, ನಾಲ್ಕೈದು ದಿನಗಳಲ್ಲಿ ನೀರಿನ ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿ ತಿಂಗಳಾದರು ನೀರಿನ ಸಂಪರ್ಕ ಸಾಧ್ಯವಾಗಿಲ್ಲ.
ಮಕ್ಕಳ ಪೋಷಕರಲ್ಲಿ ಒಬ್ಬರಾಗಿರುವ ಡಾ.ಮನಿತ ಹೇಳುವಂತೆ ಮಕ್ಕಳಿಗೆ ಅವಶ್ಯಕವಾದ ಶೌಚಾಲಯವನ್ನು ಕೇವಲ ನಿರ್ಮಾಣ ಮಾಡಿದರೆ ಹೇಗೆ? ಅದಕ್ಕೆ ನೀರಿನ ವ್ಯವಸ್ಥೆಯೇ ಇಲ್ಲ ಎಂದರೆ ಮಕ್ಕಳು ಶೌಚಾಲಯಗಳನ್ನು ಹೇಗೆ ಬಳಸುತ್ತಾರೆ. ಮಕ್ಕಳಿಗೆ ಶೌಚಾಲಯದ ಅರಿವು ಮೂಡಿಸಲು ಹಾಗೂ ಸ್ವಚ್ಛ ತುಮಕೂರಿಗಾಗಿ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ಅಷ್ಟೇ ಅಲ್ಲದೇ ಇಲ್ಲಿನ ಬಯಲು ಶೌಚದ ಸಮಸ್ಯೆಯಿಂದ ಈ ಶಾಲೆಯ ಮಕ್ಕಳು ಅನಾರೋಗ್ಯಕ್ಕೇ ಈಡಾದರೆ ವಾಸಿಯಾಗಲು ಕಷ್ಟಪಡಬೇಕಿದೆ. ಸರಕಾರಿ ಶಾಲೆಗಳ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ವಹಿಸಿದರೆ ಕನ್ನಡ ಶಾಲೆಗಳು ಮುಚ್ಚದೆ ಇನ್ನೇನು ಎಂಬುದು ಇವರ ಪ್ರಶ್ನೆಯಾಗಿದೆ. ನಗರಪಾಲಿಕೆ, ಪಾಲಿಕೆಯ ಸ್ಥಳೀಯ ಸದಸ್ಯರು ಹಾಗೂ ಅಧಿಕಾರಿಗಳು ಎಚ್ಚೆತ್ತು ಮಕ್ಕಳು ಹೊಸದಾಗಿ ನಿರ್ಮಾಣವಾಗಿರುವ ಶೌಚಾಲಯ ಬಳಸುವಂತೆ ನೀರಿನ ಸಂಪರ್ಕ ಕಲ್ಪಿಸಬೇಕಿದೆ.







