ಮಾ.13: ಫಾದರ್ ಮುಲ್ಲಾರ್ ಸೇವಾ ಸಂಸ್ಥೆಗಳ ಸಂಸ್ಥಾಪಕರ ದಿನ, ಪದವಿ ಪ್ರದಾನ ಸಮಾರಂಭ

ಮಂಗಳೂರು, ಫೆ. 9: ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಸಂಸ್ಥಾಪಕರ ದಿನ ಮತ್ತು ಪದವಿ ಪ್ರದಾನ ಸಮಾರಂಭ ಮಾರ್ಚ್ 13ರಂದು ಸಂಜೆ 5 ಗಂಟೆಗೆ ಫಾದರ್ ಮುಲ್ಲರ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅದೇ ದಿನ ಬೆಳಗ್ಗೆ ಫಾದರ್ ಮುಲ್ಲಾರ್ ಒಳಾಂಗಣ ಕ್ರೀಡಾಂಗಣ, ಜಿಮ್ನಾಶಿಯಂ ಮತ್ತು ಬಹು ಅಂತಸ್ತಿನ ಪಾರ್ಕಿಂಗ್ ವಲಯದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಫಾದರ್ ಮುಲ್ಲಾರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೊಶಿಯಸ್ ಕೊಯೆಲ್ಲೋ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪದವಿ ಪ್ರದಾನ ಸಮಾರಂಭದಲ್ಲಿ ವೈದ್ಯಕೀಯ ಕಾಲೇಜು ಮತ್ತು ಅಲೈಡ್ ಹೆಲ್ತ್ ಸೈನ್ಸಸ್, ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು, ಸ್ಕೂಲ್ ಮತ್ತು ಕಾಲೇಜು ಆಫ್ ನರ್ಸಿಂಗ್ ಹಾಗೂ ವಾಕ್ ಶ್ರವಣ ಕಾಲೇಜು ಒಟ್ಟು 654 ಪದವಿಧರರು ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದಾರೆ. ಅದೇ ದಿನ ಸಂಸ್ಥೆಯ ಸಂಸ್ಥಾಪಕರಾದ ವಂ. ಆಗಸ್ಟ್‌ಸ್ ಮುಲ್ಲರ್ ಎಸ್.ಜೆ.ಯವರ 177ನೆ ಜನ್ಮ ದಿನಾಚರಣೆಯನ್ನು ಸ್ವೀಕರಿಸಲಾಗುವುದು. ಕರಡ್‌ನ ಕೃಷ್ಣ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಸ್‌ನ ಕುಲಪತಿ ಡಾ.ವೇದ್ ಪ್ರಕಾಶ್ ಮಿಶ್ರಾ ಮುಖ್ಯ ಅತಿಥಿಯಾಗಿ,ಬೆಂಗಳೂರಿನ ಕರ್ನಾಟಕ ಮೆಡಿಕಲ್ ಕೌನ್ಸಿಲ್ (ಕೆ.ಎಂ.ಸಿ)ನ ಅಧ್ಯಕ್ಷ ಡಾ.ವೀರಭದ್ರಪ್ಪರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಫಾ.ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷ ಅತೀ.ವಂ.ಡಾ. ಅಲೋಶಿಯಸ್ ಪೌಲ್ ಡಿ ಸೋಜ ಸಮಾರಂಭದ ಅಧ್ಯಕ್ಷತೆವಹಿಸಲಿದ್ದಾರೆ ಎಂದು ವಂ.ರಿಚರ್ಡ್ ಅಲೊಶಿಯಸ್ ಕೊಯೆಲ್ಲೊ ತಿಳಿಸಿದ್ದಾರೆ.
ಫಾ.ಮುಲ್ಲ ರ್ ಒಳಾಂಗಣ ಕ್ರೀಡಾಂಗಣ, ಜಿಮ್ನಾಶಿಯಂ, ಬಹು ಅಂತಸ್ತಿನ ಪಾರ್ಕಿಂಗ್ ವಲಯ ಉದ್ಘಾಟನೆ :- ಮಾ. 13ರಂದು ಬೆಳಗ್ಗೆ ಫಾ. ಮುಲ್ಲರ್ ಒಳಾಂಗಣ ಕ್ರೀಡಾಂಗಣ, ಜಿಮ್ನಾಶಿಯಂ, ಬಹು ಅಂತಸ್ತಿನ ಪಾರ್ಕಿಂಗ್ ವಲಯವನ್ನು ಬೆಳಗ್ಗೆ 9.30 ಗಂಟೆಗೆ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಯುವಜನ ಸೇವಾ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಭಾರತ ಖ್ಯಾತ ಕ್ರೀಡಾಪಟು ಪಿ.ಟಿ.ಉಷಾ ಉದ್ಘಾಟನಾ ಸಮಾರಂಭದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫಾ.ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷ ಅತೀ.ವಂ.ಡಾ. ಅಲೋಶಿಯಸ್ ಪೌಲ್ ಡಿ ಸೋಜ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಒಳಾಂಗಣ ಕ್ರೀಡಾಂಗಣ 20 ಸಾವಿರ ಚದರ ಅಡಿ ಒಟ್ಟು ವಿಸ್ತೀರ್ಣದೊಂದಿಗೆ ರಾಷ್ಟ್ರೀಯ ಮಾನದಂಡದ ಒಂದು ಸಂಪೂರ್ಣ ಸಂಯೋಜಿತ ವಿನೂತನ ಕ್ರೀಡಾ ಸಂಕಿರ್ಣವಾಗಿದೆ. ಈ ಸಂಕೀರ್ಣದಲ್ಲಿ ನಾಲ್ಕು ಬ್ಯಾಡ್ಮಿಂಟನ್, ಒಂದು ಬಾಸ್ಕೆಟ್ ಬಾಲ್ ಮತ್ತು ಅತ್ಯಾಧುನಿಕ ಸಾಧನಗಳನ್ನು ಒಳಗೊಂಡ 4500 ಚದರ ಅಡಿ ಪ್ರದೇಶದಲ್ಲಿ ಪಿ.ಯು.ಪ್ಲೋರಿಂಗ್‌ನೊಂದಿಗೆ ಜಿಮ್ನಾಶಿಯಂ ಕಾರ್ಯನಿರ್ವಹಿಸಲಿದೆ. ಒಳಾಂಗಣ ಕ್ರೀಡಾ ಪ್ರದೇಶದಲ್ಲಿ 2ಪೂಲ್ ಟೇಬಲ್‌ಗಳು ಮತ್ತು 1000 ಚದರ ಅಡಿ ಸ್ಕಾಷ್ ಕೋರ್ಟ್‌ಗಳಿವೆ. ಬಹು ಅಂತಸ್ತಿನ ಪಾರ್ಕಿಂಗ್ 84,500 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಒಮ್ಮೇಗೆ 350 ಕಾರ್‌ಗಳನ್ನು ಪಾರ್ಕಿಂಗ್ ಮಾಡಲು ಸಾಧ್ಯವಿದೆ. 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಎಂದು ವಂ.ರಿಚರ್ಡ್ ಅಲೊಶಿಯಸ್ ಕೊಯೆಲ್ಲೊ ತಿಳಿಸಿದ್ದಾರೆ.
ಹೀಲ್ ಆ್ಯಂಡ್ ಕಂಫರ್ಟ್ ಎನ್ನುವ ಗುರಿಯೊಂದಿಗೆ 1880ರಲ್ಲಿ ಸ್ಥಾಪನೆ ಯಾಗಿರುವ ಫಾದರ್ ಮುಲ್ಲಾರ್ ಸೇವಾ ಸಂಸ್ಥೆಗಳು ಕಳೆದ 138 ವರ್ಷಗಳಲ್ಲಿ ಜಾತಿ,ಮತ ಮತ್ತು ಧರ್ಮದ ಭೇದವಿಲ್ಲದೆ ಅತ್ಯತ್ತಮ ಆರೋಗ್ಯ ಮತ್ತು ಶೈಕ್ಷಣಿಕ ಸೇವೆಯನ್ನು ಯಶಸ್ವಿ ಯಾಗಿ ಸೇವೆ ಸಲ್ಲಿಸಿದೆ. ಈ ಬಾರಿ ಸಂಸ್ಥೆ ಭಾರತದಲ್ಲಿ ಉತ್ತಮ ಸಾಧನೆ ಮಾಡಿರುವ ಪುರಸ್ಕಾರಕ್ಕೆ ಪಾತ್ರವಾಗಿದೆ.1250 ಆಸ್ಪತ್ರೆಗೆ ಪ್ರತಿ ದಿನ ಹೊರ ರೋಗಿಗಳಾಗಿ ಸುಮಾರು ಎರಡು ಸಾವಿರ ಜನ ಭೇಟಿ ನೀಡುತ್ತಾರೆ. ಸರಕಾರದ ವಿಶೇಷ ರಿಯಾಯಿತಿ ದರದ ಹೆಲ್ತ್ ಕಾರ್ಡ್ ಯೋಜನೆಯ ಪ್ರಕಾರ 2015-16ರಲ್ಲಿ 25 ಕೋಟಿ, 2016-17ರಲ್ಲಿ 30 ಕೋಟಿ ಹಾಗೂ 2017-18ರಲ್ಲಿ 35 ಕೋಟಿ ರೂ ವೆಚ್ಚದ ಚಿಕಿತ್ಸೆಯನ್ನು ಉಚಿತವಾಗಿ ಹಾಗೂ ರಿಯಾಯಿತಿ ಯೋಜನೆಯಲ್ಲಿ ನೀಡಲಾಗಿದೆ. ತುಂಬೆಯಲ್ಲಿ 150 ಹಾಸಿಗೆಗಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತದೆ. ದೇರಳಕಟ್ಟೆಯಲ್ಲಿ ಸುಸಜ್ಜಿತ ಹೋಮಿಯೋಪಥಿ ಆಸ್ಪತ್ರೆ ಇದೆ ಎಂದು ವಂ.ರಿಚರ್ಡ್ ಅಲೊಶಿಯಸ್ ಕೊಯೆಲ್ಲೊ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಎಫ್‌ಎಂಎಂಸಿಎಚ್‌ನ ಆಡಳಿತಾಧಿಕಾರಿ ವಂ.ರುಡಾಲ್ಫ್ ರವಿ ಡೇಸಾ,ಎಫ್‌ಎಂಎಂಸಿಯ ಆಡಳಿತಾಧಿಕಾರಿ ವಂ.ಅಜಿತ್ ಬಿ.ಮಿನೇಝಸ್, ಎಫ್‌ಎಂಎಚ್‌ಎಂಸಿ ಆ್ಯಂಡ್ ಎಚ್ ಆಡಳಿತಾಧಿಕಾರಿ ವಂ.ವಿನ್ಸೆಂಟ್ ವಿ ಸಲ್ದಾನಾ, ಎಫ್‌ಎಂಎಚ್‌ಟಿ ಆಡಳಿತಾಧಿಕಾರಿ ವಂ.ರೊಶನ್ ಕ್ರಾಸ್ತಾ ಹಾಗೂ ಆಡಳಿತ ವಿಭಾಗದ ಇತರ ಅಧಿಕಾರಿಗಳಾದ ಸಿಲ್ವೇಸ್ಟರ್ ಲೋಬೊ,ವಂ.ಜೋರ್ಜ್ ಜೆ ಸಿಕ್ವೇರಾ, ಜೆಸಿಂತಾ ಡಿ ಸೋಜ,ಡಾ.ಶಿವ ಪ್ರಸಾದ್, ಜಾಸ್ಮಿನ್ ಸರಿಟಾ ವಾಝ್, ಉದಯ ಕುಮಾರ್, ಪದ್ಮಜ ಉದಯ ಕುಮಾರ್, ಜ್ಯೋತಿ ಪಿಂಟೊ, ವಿಕ್ಟೋರಿಯಾ ಡಿ ಸೋಜ, ಸೀಂಥಿಯಾ, ಡಾ.ಸಂತೋಷ್ ಕಾಮತ್, ಜೋಕಬ್ ಮಾಥ್ಯು ಮೊದಲಾದವರು ಉಪಸ್ಥಿತರಿದ್ದರು.







