ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸಿ:ಎನ್.ಮಂಜುಶ್ರೀ
ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ

ಮಂಡ್ಯ, ಮಾ.9: ಮಕ್ಕಳಲ್ಲಿ ಪರಿಸರದ ಪ್ರೀತಿ, ಪರಿಸರ ಸ್ನೇಹಿ ಸ್ವಭಾವವನ್ನು ಬೆಳೆಸಬೇಕು. ಬಳಸಿ ಬಿಸಾಡುವ ಸಂಸ್ಕೃತಿಯಿಂದ ಪುನರ್ಬಳಕೆ ಸಂಸ್ಕೃತಿಯ ಕಡೆಗೆ ಮಕ್ಕಳನ್ನು ಕರೆತರಬೇಕಿದೆ ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹೇಳಿದ್ದಾರೆ.
ನಗರದ ಸೆಂಟ್ ಜಾನ್ ಶಾಲಾ ಸಭಾಂಗಣದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ ನಡೆದ 2017-18ನೆ ಸಾಲಿನ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸ್ನೇಹಿ ಸ್ವಭಾವದೊಂದಿಗೆ ಮರ-ಗಿಡಗಳನ್ನು ಉತ್ತಮವಾಗಿ ಬೆಳೆಸಬೇಕು. ಮನೆ ಹಾಗೂ ಶಾಲೆಯ ಸುತ್ತ ಹಸಿರು ವಾತಾವರಣ ನಿರ್ಮಿಸಬೇಕು. ಪರಿಸರ ಉಳಿಸುವಲ್ಲಿ ಮಕ್ಕಳ ಪಾತ್ರ ಮಹತ್ವದ್ದು ಎಂದು ಅವರು ತಿಳಿಸಿದರು.
ಹವಾಮಾನ ವೈಪರೀತ್ಯದಿಂದ ಅತಿವೃಷ್ಠಿ, ಅನಾವೃಷ್ಠಿ ಆಗುತ್ತಿದೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಿ ತೊಂದರೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕು ನೇರಳೆಕೆರೆ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಪರಿಸರ ಮಿತ್ರ ಶಾಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹತ್ತು ಶಾಲೆಗಳಿಗೆ ಹಸಿರು ಶಾಲೆ ಹಾಗೂ ಹತ್ತು ಶಾಲೆಗಳಿಗೆ ಹಳದಿ ಶಾಲೆ ಪ್ರಶಸ್ತಿ ನೀಡಲಾಯಿತು.
ವಿಜ್ಞಾನ ಪರಿಷತ್ ರಾಜ್ಯ ಸಮಿತಿ ಸದಸ್ಯ ರಾಮಚಂದ್ರ, ಮೈಸೂರು ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊಫೆಸರ್ ಡಾ.ಉಮೇಶ್, ಪರಿಸರ ಅಧಿಕಾರಿ ಉದಯಕುಮಾರ್, ಕೆ.ಎಲ್.ಸವಿತಾ, ಡಿಡಿಪಿಐ ವಿ.ಸೂರ್ಯಪ್ರಕಾಶಮೂರ್ತಿ, ಎಂ.ಶಿವಮಾದಪ್ಪ, ಕೃಷ್ಣೇಗೌಡ, ಇತರರು ಉಪಸ್ಥಿತರಿದ್ದರು.







