ಮನೆ ಮಂಜೂರಾತಿಗೆ ಲಂಚ ಸ್ವೀಕಾರ : ಗ್ರಾಪಂ ಅಧ್ಯಕ್ಷೆ ಎಸಿಬಿ ಬಲೆಗೆ
ಮಂಡ್ಯ, ಮಾ.9: ವಸತಿ ಫಲಾನುಭವಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಉಪ್ಪರಕನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಂಪಾಪುರದ ಪದ್ಮ ಶಿವರಾಜು ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ.
ಗ್ರಾಮದ ಪುಟ್ಟರಾಜು ಎಂಬುವರಿಗೆ ವಸತಿ ಮಂಜೂರು ಮಾಡಲು 25 ಸಾವಿರ ರೂ.ಗೆ ಪದ್ಮ ಶಿವರಾಜು ಬೇಡಿಕೆ ಇಟ್ಟಿದ್ದು, ಮೂರು ತಿಂಗಳ ಹಿಂದೆ 10 ಸಾವಿರ ರೂ. ಮುಂಗಡ ಪಡೆದಿದ್ದರು ಎನ್ನಲಾಗಿದೆ.
ಉಳಿದ ಹಣವನ್ನು ನೀಡಿದರೆ ಜಿಪಿಎಸ್ ನೋಂದಣಿ ಮಾಡಿಸುವುದಾಗಿ ಪದ್ಮ ಪಟ್ಟುಹಿಡಿದ ಹಿನ್ನೆಲೆಯಲ್ಲಿ ಪುಟ್ಟರಾಜು ಎಸಿಬಿಗೆ ದೂರು ನೀಡಿದ್ದರು.
ಎಸಿಬಿ ಇನ್ಸ್ ಪೆಕ್ಟರ್ ಸತೀಶ್‍ಕುಮಾರ್ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿದ ಸಿಬ್ಬಂದಿ ಪದ್ಮ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Next Story





