ಮಾನವತಾವಾದಿಗಳ ಪ್ರತಿಮೆಗಳ ಧ್ವಂಸ : ಮಾ.12ಕ್ಕೆ ಸಮಾನ ಮನಸ್ಕ ಸಂಘಟನೆಗಳಿದ ಪ್ರತಿಭಟನೆ
ಚಿಕ್ಕಮಗಳೂರು, ಮಾ.9: ದೇಶದ ವಿವಿಧ ಭಾಗಗಳಲ್ಲಿ ಮಹಾನ್ ಮಾನವತಾವಾದಿ ಹಾಗೂ ದಾರ್ಶನಿಕರುಗಳಾದ ಲೆನಿನ್, ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮಗಾಂಧಿ, ಪೆರಿಯಾರ್ ರವರ ಪ್ರತಿಮೆಗಳನ್ನು ಧ್ವಂಸ ಹಾಗೂ ವಿಕೃತಗೊಳಿಸಿ ಅವಮಾನ ಮಾಡುತ್ತಿರುವ ದುಷ್ಕರ್ಮಿಗಳ ಸಂವಿಧಾನ ವಿರೋಧಿ ಕೃತ್ಯಗಳನ್ನು ಖಂಡಿಸಲು ಮಾ. 12ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಮಾನ ಮನಸ್ಕ ಪಕ್ಷಗಳು ಹಾಗೂ ಪ್ರಗತಿಪರ ದಲಿತ, ರೈತ ಸಂಘಟನೆಗಳು ನಿರ್ಧರಿಸಿವೆ.
ಶುಕ್ರವಾರ ನಗರದಲ್ಲಿ ಜರುಗಿದ ಸಮಾನ ಮನಸ್ಕ ಪಕ್ಷ ಮತ್ತು ಸಂಘಟನೆಗಳ ಸಭೆಯಲ್ಲಿ ಸಿ.ಪಿ.ಐ., ಬಿ.ಎಸ್ಪಿ., ಜಾತ್ಯಾತೀತ ಜನತಾದಳ, ಕಾಂಗ್ರೆಸ್ ಪಕ್ಷ, ಸಿ.ಪಿ.ಐ.(ಎಂಲ್.)ದಲಿತ ಸಂಘರ್ಷ ಸಮಿತಿಗಳು, ರೈತ ಸಂಘಟನೆಗಳ ನಾಯಕರುಗಳು ಪಾಲ್ಗೊಂಡು ತ್ರಿಪುರ, ಉತ್ತರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಲೆನಿನ್, ಅಂಬೇಡ್ಕರ್, ಪೆರಿಯಾರ್, ಮಹಾತ್ಮಗಾಂಧಿಯವರ ಪ್ರತಿಮೆಗಳಿಗೆ ಅವಮಾನ ಮಾಡುವಂತಹ ಮತ್ತು ವಿಕೃತಿಗೊಳಿಸುವಂತಹ ಘಟನೆಗಳು ನಡೆಯುತ್ತಿದ್ದು, ಸಮಾಜದಲ್ಲಿ ಅರಾಜಕತೆಯನ್ನು ಸೃಷ್ಠಿಸುವ ಮೂಲಕ ಮತೀಯವಾದಿ ಶಕ್ತಿಗಳು ಅಸಹಿಷ್ಣುತೆಯನ್ನು ಮರೆಯುತ್ತಿವೆ. ಅಲ್ಲದೇ ಇದಕ್ಕೆ ಪುಷ್ಠಿ ನೀಡುವಂತೆ ಬಿ.ಜೆ.ಪಿ. ಮತ್ತು ಸಂಘ ಪರಿವಾರದ ಮುಖಂಡರುಗಳು ಕೋಮು ಪ್ರಚೋದನಾತ್ಮಕ ಮತ್ತು ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಕ್ಷೋಭೆಯನ್ನುಂಟುಮಾಡಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದಂತಹ ಬಹುಸಂಸ್ಕೃತಿ, ಬಹುಭಾಷೆ, ಬಹು ಧರ್ಮೀಯರನ್ನೊಳಗೊಂಡಂತಹ ಮಾನವೀಯ ಮೌಲ್ಯಗಳುಳ್ಳ ದೇಶದಲ್ಲಿ ಏಕ ಸಂಸ್ಕೃತಿ, ಏಕ ಭಾಷೆ, ಏಕ ಧರ್ಮದಂತಹ ಫ್ಯಾಸಿಸ್ಟ್ ಸರ್ವಾಧಿಕಾರಿ ಆಡಳಿತವನ್ನು ಪ್ರತಿಪಾದಿಸುತ್ತಿವೆ. ಇದು ಭಾರತ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ. ಅಲ್ಲದೇ ಅಂಬೇಡ್ಕರ್, ಬುದ್ಧ, ಬಸವ, ಗಾಂಧಿ, ಲೆನಿನ್‍ರವರ ವಿಚಾರಧಾರೆಯನ್ನು ಸಹಿಸದ ಕೋಮುವಾದಿಗಳು ಸಂವಿಧಾನವನ್ನೇ ಬದಲಿಸುವ ಮಾತುಗಳನ್ನು ಬಹಿರಂಗವಾಗಿಯೇ ಆಡತೊಡಗಿದ್ದಾರೆ.
ಕೋಮುವಾದಿಗಳ ಈ ನಡವಳಿಕೆಯಿಂದ ದೇಶದ ಪ್ರಜಾತಂತ್ರ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಅಪಾಯ ಎದುರಾಗಿದ್ದು, ಭಾರತೀಯ ಬಹುಸಂಸ್ಕೃತಿಯನ್ನು ರಕ್ಷಿಸಿ, ದೇಶದ ಸಂವಿಧಾನವನ್ನು ಉಳಿಸಲು ಕೋಮುವಾದಿ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹೆಚ್.ಹೆಚ್. ದೇವರಾಜ್, ಕೆ.ಟಿ. ರಾಧಾಕೃಷ್ಣ, ಜಿ.ಕೆ. ಬಸವರಾಜ್, ಆರ್.ಆರ್. ಮಹೇಶ್, ಹೆಚ್.ಎಂ. ರೇಣುಕಾರಾಧ್ಯ, ಅಣ್ಣಯ್ಯ, ದೊಡ್ಡಯ್ಯ, ಕೆ.ಕೆ. ಕೃಷ್ಣೇಗೌಡ, ಉದ್ದೇಗೌಡ, ಚಂದ್ರಪ್ಪ, ಎಂ.ಸಿ. ಶಿವಾನಂದಸ್ವಾಮಿ, ಸುರೇಖಾ ಸಂಪತ್‍ರಾಜ್, ಎಸ್.ಎಲ್. ರಾಧಾ ಸುಂದರೇಶ್, ಸುರೇಶ, ಪರಮೇಶ್, ಜಿ.ರಘು, ವಿಜಯಕುಮಾರ್, ವೇಲಾಯುಧನ್ ಮತ್ತಿತರ ಮುಖಂಡರು ಅಭಿಪ್ರಾಯಪಟ್ಟರು.
ಈ ಸಂಬಂಧ ಮಾ.12ರಂದು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಗಾಂಧಿ, ಲೆನಿನ್‍ರವರ ವಾರಸುದಾರರು ನಾವು, ಅವರ ಆಶಯಗಳನ್ನು ಜನಸಾಮಾನ್ಯರ ಮನದೊಳಗೆ ವ್ಯಾಪಕಗೊಳಿಸುವ ಸಂಕಲ್ಪ ತೊಡಲು ನಿರ್ಣಯಿಸಲಾಗಿದೆ ಎಂದು ಸಮಾನ ಮನಸ್ಕ ಪಕ್ಷಗಳು ಮತ್ತು ಪ್ರಗತಿಪರ-ದಲಿತ-ರೈತ ಸಂಘಟನೆಗಳ ಸಮನ್ವಯ ಸಂಚಾಲಕರಾದ ಬಿ.ಅಮ್ಜದ್ ಹಾಗೂ ಗುರುಶಾಂತಪ್ಪ ತಿಳಿಸಿದ್ದಾರೆ.







