ಲಂಕೆಗೆ ಬಾಂಗ್ಲಾದೇಶ ತಂಡದ ಸವಾಲು
ನಿದಾಸ್ ತ್ರಿಕೋನ ಟ್ವೆಂಟಿ-20 ಸರಣಿ

ಕೊಲಂಬೊ, ಮಾ.9: ನಿದಾಸ್ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ಶನಿವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಜಯ ಗಳಿಸಿತ್ತು. ಭಾರತದ ವಿರುದ್ಧ ಬಾಂಗ್ಲಾ ಸೋಲು ಅನುಭವಿಸಿತ್ತು.
ಇತ್ತೀಚೆಗೆ ಬಾಂಗ್ಲಾವನ್ನು ತ್ರಿಕೋನ ಏಕದಿನ ಸರಣಿ, ಟೆಸ್ಟ್, ಟ್ವೆಂಟಿ-20 ಸರಣಿಯಲ್ಲಿ ಮಣಿಸಿದ್ದ ಶ್ರೀಲಂಕಾ ತಂಡ ನಿದಾಸ್ ತ್ರಿಕೋನ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿತ್ತು. ಭಾರತದ ವಿರುದ್ಧ ಸತತ ಏಳನೇ ಪಂದ್ಯದಲ್ಲಿ ಸೋಲುವ ಅವಕಾಶದಿಂದ ಶ್ರೀಲಂಕಾ ಪಾರಾಗಿತ್ತು. ಭಾರತದ ವಿರುದ್ಧ ಗೆಲುವಿನೊಂದಿಗೆ 1-0 ಮುನ್ನಡೆ ಸಾಧಿಸಿರುವ ಶ್ರೀಲಂಕಾ ಗೆಲುವಿನ ಅಭಿಯಾನವನ್ನು ಮುಂದುವರಿಸಲು ನೋಡುತ್ತಿದೆ.
ಬಾಂಗ್ಲಾ ತಂಡದಲ್ಲಿ ಪ್ರಮುಖ ಆಟಗಾರರಿಲ್ಲ. ಗಾಯದ ಕಾರಣದಿಂದಾಗಿ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ ಟೂರ್ನಿಯ ಆರಂಭಕ್ಕ್ಕೆ ಮೊದಲೇ ತಂಡದಿಂದ ಹೊರಗುಳಿದಿದ್ದರು. ಈ ಕಾರಣದಿಂದಾಗಿ ಭಾರತದ ವಿರುದ್ಧ ಬಾಂಗ್ಲಾ ಸಮಸ್ಯೆ ಎದುರಿಸಿತ್ತು. ಇದೀಗ ಲಂಕಾದ ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗಿದೆ.
ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಲಂಕಾ 5 ವಿಕೆಟ್‌ಗಳ ಜಯ ಗಳಿಸಿತ್ತು. ನಾಯಕ ಕುಶಾಲ್ ಪೆರೇರ 37 ಎಸೆತಗಳಲ್ಲಿ 66 ರನ್ ಗಳಿಸಿ ತಂಡದ ಗೆಲುವಿಗೆ ನೆರವಾಗಿದ್ದರು.
ಶ್ರೀಲಂಕಾ ತಂಡ ತನ್ನ ಬೌಲರ್‌ಗಳಿಂದ ಭಾರೀ ನಿರೀಕ್ಷೆಯನ್ನು ಹೊಂದಿದೆ. ಆದರೆ ಕಳೆದ ಪಂದ್ಯದಲ್ಲಿ ದುಶ್ಮಂಥ ಚಮೀರಾ ಚೆನ್ನಾಗಿ ಆಡಿದ್ದರು. ತಂಡದ ಇತರ ಬೌಲರ್‌ಗಳು ರನ್ ಪ್ರವಾಹವನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದರು. ಭಾರತ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ನಾನಾ ಸಮಸ್ಯೆಗಳನ್ನು ಎದುರಿಸಿತ್ತು. ಬೌಲಿಂಗ್ ಮತ್ತು ಬ್ಯಾಟಿಂಗ್ ವೈಫಲ್ಯ ತಂಡದ ಸೋಲಿಗೆ ಕಾರಣವಾಗಿತ್ತು. ಬಾಂಗ್ಲಾ 2017ರಲ್ಲಿ ಆರ್.ಪ್ರೇಮ್‌ದಾಸ ಸ್ಟೇಡಿಯಂನಲ್ಲಿ ಲಂಕಾ ವಿರುದ್ಧ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು. 2018ರಲ್ಲಿ ಇನ್ನೊಂದು ಗೆಲುವಿನತ್ತ ನೋಡುತ್ತಿದೆ.







