ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಭಾರತಕ್ಕೆ ಆಗಮನ
ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ, ಮಾ.10: ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಶುಕ್ರವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ದಿಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ ಫ್ರಾನ್ಸ್ ಅಧ್ಯಕ್ಷರನ್ನು ಸ್ವಾಗತಿಸಿದರು.
ಫ್ರಾನ್ಸ್ ಅಧ್ಯಕ್ಷರು ತಮ್ಮ ಭೇಟಿ ವೇಳೆ ಪ್ರಮುಖವಾಗಿ ಕಡಲತೀರದ ಭದ್ರತೆ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡುವ ಕುರಿತಂತೆ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಸುಮಾರು 14 ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ರಫೆಲ್ ಫೈಟರ್ ಏರ್ಕ್ರಾಫ್ಟ್ ಖರೀದಿಸಲು ಭಾರತದ ಒಪ್ಪಂದದ ರಹಸ್ಯ ಕಾಪಾಡಿಕೊಳ್ಳಲು ಬಿಡ್ನಲ್ಲಿ ಗೌಪ್ಯ ಒಪ್ಪಂದ ನವೀಕರಿಸುವ ಬಗ್ಗೆ ಹೊಸದಿಲ್ಲಿ ಹಾಗೂ ಪ್ಯಾರಿಸ್ ಕಾರ್ಯೋನ್ಮುಖವಾಗಲಿದೆ.
ಮ್ಯಾಕ್ರೋನ್ ಮಾ.12ರ ತನಕ ಭಾರತ ಪ್ರವಾಸದಲ್ಲಿರಲಿದ್ದು, ಶನಿವಾರದಿಂದ ರಾಷ್ಟ್ರಪತಿ ಭವನದಲ್ಲಿ ಮ್ಯಾಕ್ರೋನ್ ಗೆ ಭವ್ಯ ಸ್ವಾಗತ ನೀಡಲಾಯಿತು. ಫ್ರಾನ್ಸ್ ಅಧ್ಯಕ್ಷರು ರಾಜ್ ಘಾಟ್ನಲ್ಲಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ನಮನ ಸಲ್ಲಿಸಿದರು.
ಮ್ಯಾಕ್ರೋನ್ಅವರು ಪತ್ನಿ ಬ್ರಿಗೆಟ್ ಮೇರಿ-ಕ್ಲೌಡ್ ಮ್ಯಾಕ್ರೋನ್ ಹಾಗೂ ಉದ್ಯಮಿ ಹಾಗೂ ಸಚಿವಾಲಯದ ಅಧಿಕಾರಿಗಳ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಮ್ಯಾಕ್ರೋನ್ ಭಾರತದ ಪ್ರವಾಸದ ವೇಳೆ ಆಗ್ರಾ ಹಾಗೂ ವಾರಣಾಸಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ.
ಹೊಸದಿಲ್ಲಿಯಲ್ಲಿ ಟೌನ್ಹಾಲ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. 2017ರ ಮೇನಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮ್ಯಾಕ್ರೋನ್ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ್ದಾರೆ.