ಕೈನೋವಿನಿಂದ ಬಳಲುತ್ತಿದ್ದೀರಾ? ಸರಳ ಮನೆಮದ್ದುಗಳು ಇಲ್ಲಿವೆ....
ನೀವವು ಆಗಾಗ್ಗೆ ಕೈನೋವಿನಿಂದ ಬಳಲುತ್ತೀರಾ? ಹೆಚ್ಚಿನವರಲ್ಲಿ ಕೈನೋವು ಸಾಮಾನ್ಯ ಸಮಸ್ಯೆಯಾಗಿದ್ದು, ಅದು ಮುಂಗೈ, ತೋಳು...ಹೀಗೆ ಯಾವುದೇ ಭಾಗದಲ್ಲಿ ಕಾಣಿಸಿಕೊ ಳ್ಳಬಹುದು. ಕೆಲವೊಮ್ಮೆ ಈ ನೋವು ಎಷ್ಟೊಂದು ತೀವ್ರವಾಗಿರುತ್ತದೆ ಎಂದರೆ ನಿಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡುವುದೂ ಕಷ್ಟವಾಗುತ್ತದೆ.
ಕೆಲವೊಮ್ಮೆ ಅಸಮರ್ಪಕ ನಿದ್ರಾಭಂಗಿ, ರಕ್ತಸಂಚಲನೆಯಲ್ಲಿ ತೊಡಕು, ಅತಿಯಾದ ವ್ಯಾಯಾಮ ಕೈನೋವಿಗೆ ಕಾರಣವಾಗುತ್ತವೆ. ನರದ ಹಿಂಡುವಿಕೆ, ಮೂಳೆ ಮುರಿತ, ಭುಜದ ಕೀಲಿಗೆ ಪೆಟ್ಟು, ಉಳುಕು, ಸಂಧಿವಾತ ಇತ್ಯಾದಿಗಳೂ ಕೈನೋವಿಗೆ ಪ್ರಮುಖ ಕಾರಣಗಳಾಗಿವೆ.
ಕೈನೋವಿನಿಂದ ಶೀಘ್ರ ಉಪಶಮನ ಪಡೆಯಲು ನೈಸರ್ಗಿಕ ಮನೆಮದ್ದುಗಳಿವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.......
►ಮಂಜುಗಡ್ಡೆ ಬಳಕೆ
ಮಂಜುಗಡ್ಡೆಯಿಂದ ನೋವಿರುವ ಜಾಗಕ್ಕೆ ಒತ್ತಡ ನೀಡುವುದು ಕೈನೋವಿನಿಂದ ಪಾರಾಗಲು ಪರಿಣಾಮಕಾರಿ ವಿಧಾನಗಳಲ್ಲೊಂದಾಗಿದೆ. ಅದರ ತಂಪು ನೋವಿರುವ ಭಾಗದಲ್ಲಿಯ ಅಂಗಾಂಶವನ್ನು ನಿಶ್ಚೇಷ್ಟಿತಗೊಳಿಸಲು ನೆರವಾಗುತ್ತದೆ ಮತ್ತು ತನ್ಮೂಲಕ ನೋವನ್ನು ಕಡಿಮೆಗೊಳಿಸುತ್ತದೆ. ಇದು ಉರಿಯೂತವನ್ನೂ ತಗ್ಗಿಸುತ್ತದೆ. ಟವೆಲ್ನಲ್ಲಿ ಕೆಲವು ಮಂಜುಗಡ್ಡೆಗಳನ್ನಿಟ್ಟು ಅದನ್ನು ತೋಳಿಗೆ ಸುತ್ತಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಕೆಲವು ದಿನಗಳವರೆಗೆ ಇದನ್ನು ಪುನರಾವರ್ತಿಸಿ.
► ಕೈಯನ್ನು ಮೇಲೆ ಮಾಡಿ
ನೋವಿರುವ ಕೈಯನ್ನು ಮೇಲೆ ಮಾಡಿ ಇಟ್ಟುಕೊಳ್ಳುವುದರಿಂದ ತೋಳಿನಲ್ಲಿ ರಕ್ತಸಂಚಾರ ಉತ್ತಮಗೊಂಡು ಶಮನ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಮಲಗಿ ವಿಶ್ರಾಂತಿ ಪಡೆಯುವಾಗ ಅಥವಾ ನಿದ್ರಿಸುವಾಗ ತೋಳಿನ ಕೆಳಗೆ ಒಂದೆರಡು ದಿಂಬುಗಳನ್ನು ಇಟ್ಟುಕೊಂಡರೆ ರಕ್ತಸಂಚಾರ ಉತ್ತಮಗೊಳ್ಳಲು ನೆರವಾಗುತ್ತದೆ.
► ವಿಶ್ರಾಂತ ಸ್ಥಿತಿ
ಕೈಯನ್ನು ವಿಶ್ರಾಂತ ಸ್ಥಿತಿಯಲ್ಲಿಟ್ಟುಕೊಂಡರೆ ಸೌಮ್ಯನೋವಿನೊಂದಿಗೆ ಉಂಟಾಗುವ ಮೃದು ಅಂಗಾಂಶದ ಹಾನಿಯು ನಿವಾರಣೆಯಾಗುತ್ತದೆ. ನೋವು ಮತ್ತು ಉರಿಯೂತ ವನ್ನು ಕಡಿಮೆ ಮಾಡಲು ನಿಮ್ಮ ಕೈಯನ್ನು ಮೃದುವಾದ ದಿಂಬಿನ ಮೇಲೆ ಇಟ್ಟುಕೊಳ್ಳಿ. 72 ಗಂಟೆಗಳ ಯಾವುದೇ ಕಷ್ಟದ ಕೆಲಸ ಮಾಡದೆ ಕೈಗೆ ವಿಶ್ರಾಂತಿಯನ್ನು ನೀಡಿ.
► ಬಿಸಿನೀರಿನ ಚಿಕಿತ್ಸೆ
ಬಿಸಿನೀರಿನ ಚಿಕಿತ್ಸೆಯು ಕೈನೋವನ್ನು ಗುಣಪಡಿಸುತ್ತದೆ. ಈ ವಿಧಾನವು ಪೆಟ್ಟು ಬಿದ್ದ ಅಥವಾ ನೋವು ಆರಂಭವಾದ 48 ಗಂಟೆಗಳ ನಂತರವೇ ಪರಿಣಾಮಕಾರಿಯಾಗುತ್ತದೆ. ಟಬ್ ಅಥವಾ ದೊಡ್ಡಗಾತ್ರದ ಬಕೆಟ್ನಲ್ಲಿ ಬಿಸಿನೀರು ತುಂಬಿ 10-15 ನಿಮಿಷಗಳ ಕಾಲ ಕೈಯನ್ನು ಅದರಲ್ಲಿ ಮುಳುಗಿಸಿ. ಇದನ್ನು ದಿನಕ್ಕೆರಡು ಬಾರಿ ಮಾಡಿ.
► ಮಸಾಜ್
ಮಸಾಜ್ ಕೈನೋವಿಗೆ ಇನ್ನೊಂದು ಉತ್ತಮ ಮನೆಮದ್ದಾಗಿದೆ. ಅದು ನೋವಿರುವ ಜಾಗದಲ್ಲಿಯ ಬಿಗಿತವನ್ನು ನಿವಾರಿಸುತ್ತದೆ. ಒಂದು ಚಮಚ ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದರಿಂದ ನೋವಿರುವ ಭಾಗದಲ್ಲಿ ಮಸಾಜ್ ಮಾಡುವುದರಿಂದ ರಕ್ತಸಂಚಾರವು ಉತ್ತಮಗೊಳ್ಳುತ್ತದೆ. ಇದನ್ನು ದಿನಕ್ಕೆ ಹಲವಾರು ಬಾರಿ ಪುನರಾವರ್ತಿಸಿ.
► ಅರಿಷಿಣ
ಅರಿಷಿಣದಲ್ಲಿರುವ ಕರ್ಕುಮಿನ್ ಸಂಯುಕ್ತದಲ್ಲಿರುವ ಉರಿಯೂತ ನಿರೋಧಕ ಗುಣಗಳು ಮತ್ತು ಉತ್ಕರ್ಷಣ ನಿರೋಧಕಗಳು ಊತವನ್ನು ಮತ್ತು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಎರಡು ಚಮಚ ಅರಿಷಿಣ ಪುಡಿಯನ್ನು ಒಂದು ಚಮಚ ತೆಂಗಿನೆಣ್ಣೆಯೊಂದಿಗೆ ಸೇರಿಸಿ ಈ ಮಿಶ್ರಣವನ್ನು ನೋವಿರುವ ಭಾಗದಲ್ಲಿ ಹಚ್ಚಿಕೊಳ್ಳಿ. ದಿನಕ್ಕೆರಡು ಬಾರಿ ಹೀಗೆ ಮಾಡುವುದರಿಂದ ನೋವಿನಿಂದ ಉಪಶಮನ ದೊರೆಯುತ್ತದೆ.
► ಶುಂಠಿ
ಶುಂಠಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿರೋಧಕ ಗುಣಗಳು ಯಾವುದೇ ಬಗೆಯ ನೋವಿನಿಂದ ಮುಕ್ತಿ ನೀಡುತ್ತವೆ. ಶುಂಠಿಯು ರಕ್ತಸಂಚಾರವನ್ನು ಉತ್ತಮಗೊಳಿಸುವ ಮೂಲಕ ನೋವಿನಿಂದ ಶೀಘ್ರ ಬಿಡುಗಡೆ ಪಡೆಯಲು ನೆರವಾಗುತ್ತದೆ. ಪ್ರತಿದಿನ ಮೂರು ಕಪ್ಗಳಷ್ಟು ಜಿಂಜರ್ ಟೀ ಸೇವಿಸಿ.
► ಆ್ಯಪಲ್ ಸಿಡರ್ ವಿನೆಗರ್
ಆ್ಯಪಲ್ ಸಿಡರ್ ವಿನೆಗರ್ ಕೈನೋವಿಗೆ ಇನ್ನೊಂದು ಪರಿಣಾಮಕಾರಿ ಮನೆಮದ್ದಾ ಗಿದೆ. ಎರಡು ಕಪ್ಗಳಷ್ಟು ಕಚ್ಚಾ, ಫಿಲ್ಟರ್ ಮಾಡಿರದ ಆ್ಯಪಲ್ ಸಿಡರ್ ವಿನೆಗರ್ ಅನ್ನು ನಿಮ್ಮ ಸ್ನಾನದ ನೀರಿಗೆ ಸೇರಿಸಿ ನೋವಿರುವ ಕೈಯನ್ನು ಸುಮಾರು 30 ನಿಮಿಷಗಳ ಕಾಲ ಮುಳುಗಿಸಿ. ನೋವು ಕಡಿಮೆಯಾಗುವವರೆಗೆ ಪ್ರತಿದಿನ ಇದನ್ನು ಪುನರಾವರ್ತಿಸಿ.
► ಲ್ಯಾವೆಂಡರ್ ತೈಲ ಐದು ಹನಿಗಳಷ್ಟು ಲ್ಯಾವೆಂಡರ್ ತೈಲವನ್ನು ಬಿಸಿನೀರಿನ ಬಕೆಟ್ಗೆ ಸೇರಿಸಿ ಸುಮಾರು ಅರ್ಧ ಗಂಟೆ ಕಾಲ ಕೈಯನ್ನು ಅದರಲ್ಲಿ ಇಡಿ. ಇದು ತೋಳಿನ ನೋವು ಮತ್ತು ಉರಿಯೂತವನ್ನು ತಗ್ಗಿಸುತ್ತದೆ.
► ಮ್ಯಾಗ್ನೇಷಿಯಂ ಒಳಗೊಂಡ ಆಹಾರ
ಮ್ಯಾಗ್ನೇಷಿಯಂ ಸ್ನಾಯುಗಳು ಸಂಕುಚಿತಗೊಳ್ಳಲು ಮತ್ತು ನರಗಳು ಸರಿಯಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ, ತನ್ಮೂಲಕ ಕೈನೋವಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತದೆ. ಬೀನ್ಸ್, ನಟ್ಸ್, ಹಸಿರು ಎಲೆಗಳ ತರಕಾರಿಗಳು, ಇಡಿಯ ಧಾನ್ಯ ಇತ್ಯಾದಿಗಳಂತಹ ಮ್ಯಾಗ್ನೇಷಿಯಂ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ.