ರಂಡಾಮೂಳಂನಲ್ಲಿ ಜಾಕಿ ಚಾನ್?

ಮೋಹನ್‌ಲಾಲ್ ಅಭಿಮಾನಿಗಳು ಮಾತ್ರವಲ್ಲ, ಭಾರತೀಯ ಚಿತ್ರಪ್ರೇಮಿಗಳು ಅಪಾರ ನಿರೀಕ್ಷೆಯೊಂದಿಗೆ ಕಾಯುತ್ತಿರುವ ರಂಡಾಮೂಳಂ ಚಿತ್ರದ ತಾರಾಬಳಗದ ಆಯ್ಕೆ ಭರದಿಂದ ಸಾಗಿದೆಯಂತೆ. ಎಂ.ಟಿ.ವಾಸುದೇವನ್ ನಾಯರ್ ಅವರ ರಂಡಾಮೂಳಂ ಕಾದಂಬರಿಯನ್ನು ಆಧರಿಸಿದ ಈ ಚಿತ್ರವು ಮಹಾಭಾರತದ ಕಥಾವಸ್ತುವನ್ನು ಹೊಂದಿದೆ. ಚಿತ್ರದಲ್ಲಿ ಮೋಹನ್‌ಲಾಲ್ ಭೀಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಜಯ್‌ದೇವಗನ್, ನಾಗಾರ್ಜುನ, ಮಹೇಶ್ ಬಾಬು ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತತಾರೆಯರು ಈ ಚಿತ್ರದಲ್ಲಿ ನಟಿಸಲಿದ್ದಾರೆ.
ಇದೂ ಸಾಲದೆಂಬ ಆ್ಯಕ್ಷನ್ ಚಿತ್ರಗಳಿಂದ ವಿಶ್ವಾದ್ಯಂತ ಮನೆಮಾತಾಗಿರುವ ಖ್ಯಾತ ನಟ ಜಾಕಿಚಾನ್ ಕೂಡಾ ರಂಡಾಮೂಳಂನಲ್ಲಿ ನಟಿಸಲಿದ್ದಾರೆಂಬ ಬಲವಾದ ವದಂತಿಗಳು ಕೇಳಿಬರುತ್ತಿವೆ. ಭೀಮನಿಗೆ ಗೆರಿಲ್ಲಾ ಯುದ್ಧವಿದ್ಯೆಯನ್ನು ಕಲಿಸುವ ನಾಗಾ ವಂಶದ ರಾಜನ ಪಾತ್ರದಲ್ಲಿ ಜಾಕಿ ಕಾಣಿಸಿಕೊಳ್ಳಲಿದ್ದಾರೆ. ಆದಾಗ್ಯೂ ಚಿತ್ರತಂಡ ಈ ಸುದ್ದಿಯನ್ನು ಇನ್ನೂ ದೃಢೀಕರಿಸಿಲ್ಲ.
ರಂಡಾಮೂಳಂನ ಯುದ್ಧದ ದೃಶ್ಯಗಳನ್ನು ಚಿತ್ರೀಕರಿಸಲು ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ರಿಚರ್ಡ್ ರೆಯಾನ್ ಆಗಮಿಸಲಿದ್ದಾರೆ. ಬ್ರಾಡ್‌ಪಿಟ್ ನಾಯಕನಾಗಿರುವ ಟ್ರಾಯ್‌ಗೂ ರೆಯಾನ್ ಸಾಹಸನಿರ್ದೇಶನ ಮಾಡಿದ್ದರು. ಚಿತ್ರದ ಇನ್ನು ಕೆಲವು ಆ್ಯಕ್ಷನ್ ದೃಶ್ಯಗಳನ್ನು ಹಾಲಿವುಡ್‌ನ ಇನ್ನೋರ್ವ ಸಾಹಸ ಸಂಯೋಜಕ ಪೀಟರ್‌ಹೇಮ್ಯಾನ್ ಸಂಯೋಜಿಸಲಿದ್ದಾರೆ.
ಚಿತ್ರದ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ 100 ಎಕರೆ ವಿಸ್ತೀರ್ಣದ ಪ್ರದೇಶ ಬೇಕಾಗಿದ್ದು, ಅದಕ್ಕಾಗಿ ಕೊಯಮತ್ತೂರು ಹಾಗೂ ಎರ್ನಾಕುಲಂ ಜಿಲ್ಲೆಯ ಕೆಲವು ಸ್ಥಳಗಳನ್ನು ಪರಿಶೀಲಿಸಲಾಗುತ್ತಿದೆ.
ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿರುವ ರಂಡಾಮೂಳಂ ಮುಂದಿನ ವರ್ಷದ ಆರಂಭದ ವೇಳೆಗೆ ಚಿತ್ರೀಕರಣ ಆರಂಭಿಸಲಿದೆ. ಒಡಿಯನ್ ಚಿತ್ರಕ್ಕಾಗಿ ತೆಳ್ಳಗಾಗಿದ್ದ ಮೋಹನ್‌ಲಾಲ್‌ಗೆ ಇದೀಗ ಭೀಮನ ಪಾತ್ರಕ್ಕಾಗಿ ಸಾಕಷ್ಟು ದಪ್ಪಗಾಗಬೇಕಾಗುತ್ತದೆಂದು ನಿರ್ದೇಶಕ ಶ್ರೀಕುಮಾರ್ ಹೇಳಿಕೊಂಡಿದ್ದಾರೆ.







