ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ: ರಾಜೇಂದ್ರ ಕುಮಾರ್
ಬೆಂಗಳೂರು, ಮಾ. 10: ಸಹಕಾರ ಮಾರಾಟ ಮಂಡಳಿ ಪ್ರತಿವರ್ಷ 1ಸಾವಿರ ಕೋಟಿ ರೂ.ಮೇಲ್ಪಟ್ಟು ವಹಿವಾಟು ನಡೆಸುತ್ತಿದ್ದು, ಈ ವರ್ಷ ಕೃಷಿ ಉತ್ಪನ್ನ ಖರೀದಿ ಹೆಚ್ಚಾಗಿರುವುದರಿಂದ ಮಾರ್ಚ್ ಅಂತ್ಯದೊಳಗೆ 2,500 ಕೋಟಿ ರೂ.ವಹಿವಾಟು ನಡೆಸಲು ಉದ್ದೇಶಿಸಲಾಗಿದೆ ಎಂದು ಮಹಾ ಮಂಡಳಿಯ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಮಂಡಳವು 1943 ಸ್ಥಾಪನೆಗೊಂಡು ಈ ವರ್ಷ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಸಂಸ್ಥೆ ಕೃಷಿ ಆಧಾರಿತ ವ್ಯವಹಾರಗಳನ್ನು ನಡೆಸುತ್ತಾ ಬಂದಿದ್ದು, ರೈತರಿಗೆ ಅಗತ್ಯವಿರುವ ರಸಗೊಬ್ಬರ, ಬೀಜ, ಔಷಧಿ ಇತ್ಯಾದಿಗಳನ್ನು ಕೃಷಿ ಹಂಗಾಮಿನಲ್ಲಿ ಸಹಕಾರ ಸಂಘಗಳ ಮೂಲಕ ಪೂರೈಕೆ ಮಾಡುತ್ತದೆ. ಕೃಷಿ ಉತ್ಪನ್ನಗಳ ಖರೀದಿಗೆ ವೇದಿಕೆ ಕಲ್ಪಿಸುತ್ತದೆ ಎಂದರು.
ಕೃಷಿ ಇಲಾಖೆ ಮೂಲಕ ಮಹಾ ಮಂಡಳಕ್ಕೆ ದಾಸ್ತಾನು ರಸಗೊಬ್ಬರ ಖರೀದಿಗೆ ಬ್ಯಾಂಕಿನಿಂದ 500 ಕೋಟಿ ರೂ.ಸಾಲ ನೀಡಿದ್ದು, ಇದನ್ನು ರೈತರಿಗೆ ಬೇಕಾಗುವ ರಸಗೊಬ್ಬರ ಖರೀದಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಟ್ಟು 1.30ಲಕ್ಷ ಟನ್ ರಸಗೊಬ್ಬರ ದಾಸ್ತಾನಿದ್ದು, 1ಲಕ್ಷ ಟನ್ ಕೃಷಿ ಇಲಾಖೆ ಬೇಡಿಕೆಯಂತೆ ದಾಸ್ತಾನು ಮಾಡಲಾಗಿದೆ.
ಬೀದರ್, ಕಲಬುರಗಿ, ರಾಯಚೂರು ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ತೊಗರಿ ಖರೀದಿಗೆ ಒಟ್ಟು 386 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ 3,04,124 ರೈತರು ನೋಂದಣಿ ಮಾಡಿದ್ದು, 1,81,387 ರೈತರಿಂದ 23,52,626 ಕ್ವಿಂಟಾಲ್ ತೊಗರಿ ಖರೀದಿ ಮಾಡಲಾಗಿದೆ ಎಂದರು.







