ಬಿಜೆಪಿ ನಾಯಕರು ಗಾಂಧಿಗೆ ಕೈ ಮುಗಿಯುತ್ತಲೇ ಗೋಡ್ಸೆಯನ್ನು ನೆನೆಯುತ್ತಾರೆ: ಪ್ರಕಾಶ್ ರೈ

ಬೆಂಗಳೂರು, ಮಾ.10: ಬಿಜೆಪಿ ನಾಯಕರಿಗೆ ಬೆಳಗ್ಗೆಯಿಂದ ಸಂಜೆವರೆಗೆ ನೂರು ಸುಳ್ಳು ಹೇಳಲೇಬೇಕು ಎಂಬುದು ರೂಢಿಗತವಾಗಿದೆ. ಹೀಗಾಗಿ ಗಾಂಧಿಗೆ ಕೈ ಮುಗಿಯುತ್ತಲೇ ಗೋಡ್ಸೆಯನ್ನು ನೆನೆಯುತ್ತಾರೆ. ಕಪ್ಪು ಹಣದ ವಿರುದ್ಧ ಮಾತನಾಡುತ್ತಲೇ ಚುನಾವಣೆಯಲ್ಲಿ ಕಪ್ಪು ಹಣ ಹಂಚುತ್ತಾರೆ. ಇಂತಹ ವಿಚಾರದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಕ್ಕಿಂತ ಜನಪರ ಶಕ್ತಿಗಳನ್ನು ಕಟ್ಟುವ ಕಡೆಗೆ ಯೋಚಿಸಬೇಕಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.
ಶನಿವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ‘ಎತ್ತ ಸಾಗುತ್ತಿದೆ ಭಾರತ?’ ವಿಚಾರ ಸಂಕಿರಣವನ್ನು ಮಾತನಾಡಿದ ಅವರು, ಕೋಮುವಾದಿಗಳು ಮಹಾ ಸುಳ್ಳುಗಾರರು ಹಾಗೂ ಭಯಪೀಡಿತರು. ಆದರೆ, ಪ್ರಗತಿಪರರು ಅಸಂಘಟಿತರಾಗಿರುವುದೇ ಅವರ ಶಕ್ತಿ. ಕೋಮುವಾದಿಗಳ ಕ್ರಿಯೆಗೆ ಪ್ರತಿಕ್ರಿಯೆ ಕೊಡುವುದಕ್ಕಾಗಿ ಪ್ರತಿಭಟನೆ, ಸಭೆ, ಸಮಾರಂಭಗಳನ್ನು ನಡೆಸುವುದಷ್ಟೆ ನಮ್ಮ ಕೆಲಸವಲ್ಲ. ಅಬ್ಬರ ಪ್ರಚಾರಕ್ಕಿಂತ ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಪಿಸುಮಾತಿನಲ್ಲಿಯೆ ಜನಪರ ವಿಷಯಗಳ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪ್ರಗತಿಪರರ ಜವಾಬ್ದಾರಿ ಹೆಚ್ಚಾಗಿದೆ. ಮೇಕಿಂಗ್ ಇಂಡಿಯಾ ಎನ್ನುವ ಮೂಲಕ ದೇಶವನ್ನು ಮಾರಾಟಕ್ಕಿಟ್ಟಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಅದೇ ಹೊತ್ತಿನಲ್ಲಿ ಇತರೆ ಪಕ್ಷಗಳು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ತಡೆಯುವುದು ನಮ್ಮ ಜವಾಬ್ದಾರಿ ಎಂದು ಅವರು ಹೇಳಿದರು.
ಹಿರಿಯ ಸಾಹಿತಿ ದೇವನೂರ ಮಹಾದೇವ ಮಾತನಾಡಿ, ಪ್ರಚಲಿತ ದಿನದಲ್ಲಿ ದಲಿತ ಸಂಘಟನೆಗಳು ಒಂದಾಗಿರುವುದು ಆಶಾದಾಯಕ ಬೆಳವಣಿಗೆ. ಆದರೆ, ದಲಿತ ಸಂಘಟನೆಗಳು ವಿದ್ಯಾರ್ಥಿಗಳ ಬಲವಿಲ್ಲದೆ ದುರ್ಬಲಗೊಂಡಿವೆ. ಈ ಬಗ್ಗೆ ಪರಾಮರ್ಶಿಸಿ ವಿದ್ಯಾರ್ಥಿ ಸಂಘಟನೆಗಳಿಗೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ಶಕ್ತಿಯುತವಾಗಬೇಕು ಎಂದು ಆಶಿಸಿದರು.
ವಾರ್ತಾಭಾರತಿ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ ಮಾತನಾಡಿ, ಭಾರತ ಸಂವಿಧಾನದ ಆಶಯದ ವಿರುದ್ಧವಾಗಿ ನಡೆಯುತ್ತಿರುವುದಕ್ಕೆ ದಿನನಿತ್ಯ ದಲಿತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ದಲಿತರ ಹತ್ಯೆಯೆ ಸಾಕ್ಷಿಯಾಗಿದೆ ಎಂದು ವಿಷಾದಿಸಿದರು.
ಸಮಾಜದಲ್ಲಿ ಬದಲಾವಣೆ ಬರಬೇಕಾದರೆ ಪ್ರತಿರೋಧದ ಧ್ವನಿ ಹೆಚ್ಚಾಗಬೇಕು. ಹೋರಾಟದ ಸ್ವರೂಪವು ಬದಲಾಗಬೇಕಾಗಿದೆ. ನ್ಯಾಯಕ್ಕಾಗಿ ವರ್ಷಾನುಗಟ್ಟಲೆ ಸತ್ಯಾಗ್ರಹ ನಡೆಸುವುದರಿಂದ ಯಾವುದೆ ಪ್ರಯೋಜನವಿಲ್ಲವೆಂಬುದನ್ನು ಇತಿಹಾಸ ತಿಳಿಸಿಕೊಟ್ಟಿದೆ. ಹೀಗಾಗಿ ಆ ಕ್ಷಣವೇ ನ್ಯಾಯ ಸಿಗಬೇಕೆಂಬ ಧೋರಣೆಯಿಂದ ಹೋರಾಟ ರೂಪಿತಗೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಸಮಾಜದಲ್ಲಿ ಸಾವಿರಾರು ಅನ್ಯಾಯವಿದೆ
ಸಮಾಜದಲ್ಲಿ ಸಾವಿರ ಅನ್ಯಾಯಗಳು ನಡೆಯುತ್ತಿವೆ. ಆದರೆ, ನಾವು ರೂಢಿಗತವಾಗಿರುವ ಕೆಲವು ಅನ್ಯಾಯಗಳ ಸುತ್ತಲೆ ನಮ್ಮ ಚಿಂತನೆ ಸುತ್ತುತ್ತಿರುವುದು ವಿಪರ್ಯಾಸ. ಬದಲಾದ ಕಾಲಘಟ್ಟದಲ್ಲಿ ಅನ್ಯಾಯದ ಸ್ವರೂಪವು ಬದಲಾಗುತ್ತದೆ ಎಂಬ ಸೂಕ್ಷ್ಮ ಸಂವೇದನೆ ಹೊಂದಿದ್ದರೆ ಸಾವಿರಾರು ಅನ್ಯಾಯದ ಪಟ್ಟಿಯನ್ನು ಮಾಡಬಹುದಾಗಿದೆ. ಮುಖ್ಯವಾಗಿ ಕ್ರಿಕೆಟ್ ತಂಡದಲ್ಲಿ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ ಸಿಗಬೇಕು ಎಂಬ ಬೇಡಿಕೆಯನ್ನು ಇಲ್ಲಿಯವರೆಗೂ ಯಾರು ಪ್ರಶ್ನಿಸಿದ ಉದಾಹರಣೆಯಿಲ್ಲ. ಹೀಗೆ ಹುಡುಕುತ್ತಾ ಹೋದರೆ ಅನ್ಯಾಯದ ಸಾವಿರಾರು ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಇಂತಹ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತಹ ನಿಸ್ವಾರ್ಥ ಹೋರಾಟಗಾರರ ಅಗತ್ಯವಿದೆ.
-ಅಬ್ದುಲ್ ಸಲಾಂ ಪುತ್ತಿಗೆ, ಸಂಪಾದಕರು, ವಾರ್ತಾಭಾರತಿ







