ಓಲಾ ಕಂಪೆನಿಯ ವಿರುದ್ಧ ಪ್ರತಿಭಟಿಸಿದ ಚಾಲಕರ ಬಂಧನ-ಬಿಡುಗಡೆ

ಮಂಗಳೂರು, ಮಾ.10: ಓಲಾ ಕಂಪೆನಿಯ ಅನೀತಿ ಹಾಗೂ ದೌರ್ಜನ್ಯವನ್ನು ಖಂಡಿಸಿ ದ.ಕ.ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಡ್ರೈವರ್ಸ್ ಮತ್ತು ಓನರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಟ್ಯಾಕ್ಸಿ ಚಾಲಕರು ನಗರದ ಲಾಲ್‌ಬಾಗ್ ಬಳಿಯಿರುವ ಓಲಾ ಕಂಪೆನಿಯ ಮುಂದೆ ರಸ್ತೆ ತಡೆ ನಡೆಸಲು ಮುಂದಾದ ಘಟನೆ ಶನಿವಾರ ನಡೆಯಿತು.
ಓಲಾ ಕಂಪೆನಿಯವರು ಮಾತುಕತೆಗೆ ಬರಬೇಕು. ಸ್ವತಃ ಕಂಪೆನಿಯವರು ಕಚೇರಿಗೆ ಬೀಗ ಜಡಿದು ಹೋಗಿರುವುದು ಸರಿಯಲ್ಲ ಎಂದ ಪ್ರತಿಭಟನಾಕಾರರು ಕಂಪೆನಿಯವರು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಪೊಲೀಸರು ಮತ್ತು ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಚಾಲಕರು ರಸ್ತೆ ತಡೆ ನಡೆಸಲು ಮುಂದಾದರು. ತಕ್ಷಣ ಪೊಲೀಸರು ನೂರಕ್ಕೂ ಅಧಿಕ ಚಾಲಕರನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಅಸೋಸಿಯೇಶನ್‌ನ ಪದಾಧಿಕಾರಿಗಳ ಒತ್ತಡಕ್ಕೆ ಮಣಿದ ಪೊಲೀಸರು ಚಾಲಕರನ್ನು ಬಿಡುಗಡೆಗೊಳಿಸಿದರು.
ಓಲಾ ಕಂಪೆನಿಯು ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಚಾಲಕರನ್ನು ಶೋಷಣೆಗೊಳಪಡಿಸುತ್ತಿದೆ. ಈ ಅನ್ಯಾಯದ ವಿರುದ್ಧ ಕಂಪೆನಿಗೆ ಎಚ್ಚರಿಕೆ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಕಂಪೆನಿಯ ಧೋರಣೆಯನ್ನು ಖಂಡಿಸಿ 5 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದನ ಸಿಗಲಿಲ್ಲ. ಹತಾಶಗೊಂಡ ಚಾಲಕರು ಕಂಪೆನಿಯ ಮುಂಭಾಗದ ರಸ್ತೆ ತಡೆ ನಡೆಸಲು ಮುಂದಾಗಬೇಕಾಯಿತು ಎಂದು ಅಸೋಸಿಯೇಶನ್‌ನ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಅಧ್ಯಕ್ಷ ಜಗರಾಜ್ ರೈ, ಉಪಾಧ್ಯಕ್ಷ ಮುನವ್ವರ್ ಕುತ್ತಾರ್, ಸಾದಿಕ್ ಕುತ್ತಾರ್, ಕಮಲಾಕ್ಷ ಬಜಾಲ್, ವೈ. ಶಿವ, ಸುನೀಲ್ ರಾವ್, ಸುಧಾಕರ್ ಮತ್ತಿತರರು ಪಾಲ್ಗೊಂಡರು.







