ಚುನಾವಣೆ ನಿರ್ವಹಣೆಯಲ್ಲಿ ಬದಲಾವಣೆ: ಓಂಪ್ರಕಾಶ್ ರಾವತ್

ಬೆಂಗಳೂರು, ಮಾ. 10: ಚುನಾವಣಾ ಆಯೋಗ ಇದುವರೆಗೂ ತಾನು ನಡೆಸಿರುವ ಚುನಾವಣೆಗಳಲ್ಲಿ ಪಡೆದಿರುವ ಅನುಭವಗಳನ್ನು ಆಧರಿಸಿ ಚುನಾವಣೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ರೂಪಿಸುತ್ತಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಹೇಳಿದ್ದಾರೆ.
ಶನಿವಾರ ನಗರದ ಐಐಎಂ ಸಭಾಂಗಣದಲ್ಲಿ ‘ಚುನಾವಣೆ ಮತ್ತು ರಾಜಕೀಯ ಸುಧಾರಣೆ’ ಕುರಿತಂತೆ ಏರ್ಪಡಿಸಿದ್ದ 14ನೆ ವಾರ್ಷಿಕ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ನಿರ್ವಹಿಸುತ್ತಿರುವ ಕುರಿತು ಹಲವು ಬದಲಾವಣೆ ತರಲಾಗಿದೆ. ಇನ್ನೂ ಸಾಕಷ್ಟು ಬದಲಾವಣೆಗಳ ಅಗತ್ಯವಿದ್ದು, ಈ ಕುರಿತಂತೆ ಸುಧಾರಿತ ಚುನಾವಣೆಗಾಗಿ ಚುನಾವಣಾ ಆಯೋಗ ಸರಕಾರಕ್ಕೆ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿದೆ. ಚುನಾವಣೆಯಲ್ಲಿ ಬಳಕೆಯಾಗುತ್ತಿರುವ ಹಣ ಕುರಿತು ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದರು.
ನೋಂದಣಿ ರದ್ದು: ಅಪರಾಧಿ ಹಿನ್ನೆಲೆಯುಳ್ಳವರು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ, ಚುನಾವಣಾ ಕಾನೂನು ಮತ್ತು ನಿಯಮಗಳಲ್ಲಿ ಬದಲಾವಣೆ ತರಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದ ಅವರು, ರಾಜಕೀಯ ಪಕ್ಷಗಳ ನೋಂದಣಿ ಮತ್ತು ನೋಂದಣಿ ರದ್ದು ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಮಾತ್ರ ಇದೆ ಎಂದರು.
ರಾಜಕೀಯ ಪಕ್ಷಗಳು ನೋಂದಣಿ ಮಾಡಿಸಿಕೊಂಡಿದ್ದರೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ. ಇಂತಹ ಪಕ್ಷಗಳ ಮೇಲೆ ಆಯೋಗ ಕಣ್ಣಿಟ್ಟಿದೆ ಎಂದ ಅವರು, ರಾಜಕೀಯ ಪಕ್ಷಗಳು ಆದಾಯ ತೆರಿಗೆಯಿಂದ ವಿನಾಯಿತಿಯನ್ನು ಪಡೆದುಕೊಂಡಿವೆ. ಆದರೆ, ಚುನಾವಣಾ ಆಯೋಗ ಆದಾಯ ತೆರಿಗೆ ವಿನಾಯಿತಿ ಕುರಿತಂತೆ ಹೊಸ ನೀತಿ ತರಲು ಚಿಂತನೆ ನಡೆಸಿದೆ ಎಂದರು.
ಚುನಾವಣೆಯಲ್ಲಿ ಭಾಗವಹಿಸುವ ಮತ್ತು ವಿಜೇತರಾಗುವ ಪಕ್ಷಗಳು ಆದಾಯ ತೆರಿಗೆ ವಿನಾಯಿತಿ ಪಡೆಯಲು ತಮ್ಮ ಎಲ್ಲ ಮಾಹಿತಿಗಳನ್ನು ಆಯೋಗಕ್ಕೆ ಸಲ್ಲಿಸುವ ಅವಶ್ಯಕತೆ ಇದೆ ಎಂದ ಅವರು, ಕೇಂದ್ರ ಮತ್ತು ರಾಜ್ಯ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆಯೂ ಹಲವು ಸುಧಾರಣೆ ತರಲು ಯತ್ನಿಸಲಾಗುತ್ತಿದೆ ಎಂದರು.







