ಐಎಸ್‌ಎ ಶೃಂಗ ಜಾಗತಿಕ ಇಂಧನ ಸುರಕ್ಷತೆಯತ್ತ ಬೃಹತ್ ಹೆಜ್ಜೆ: ಸೊಲಿಮ್
ಮಾ.11ರಂದು ಸೌರ ಒಕ್ಕೂಟ ಶೃಂಗ ಸಂಭೆ

ಹೊಸದಿಲ್ಲಿ, ಮಾ.10: ಸೌರಶಕ್ತಿಯ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತ ಮತ್ತು ಫ್ರಾನ್ಸ್‌ನ ಜಂಟಿ ಸಹಭಾಗಿತ್ವದಲ್ಲಿ ನಾಳೆ(ಮಾ.11ರಂದು) ಹೊಸದಿಲ್ಲಿಯಲ್ಲಿ ನಡೆಯಲಿರುವ ಪ್ರಪ್ರಥಮ ಅಂತರಾಷ್ಟ್ರೀಯ ಸೌರ ಒಕ್ಕೂಟ ಶೃಂಗಸಭೆ ಜಾಗತಿಕ ಇಂಧನ ಸುರಕ್ಷತೆಯತ್ತ ಒಂದು ಬೃಹತ್ ಹೆಜ್ಜೆಯಾಗಿದ್ದು, ಹವಾಮಾನ ಬದಲಾವಣೆ ಹಾಗೂ ವಾಯುಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ಒಂದು ಹೆಗ್ಗುರುತು ಆಗಲಿದೆ ಎಂದು ವಿಶ್ವಸಂಸ್ಥೆಯ ಪರಿಸರ ವಿಭಾಗದ ಮುಖ್ಯಸ್ಥ ಎರಿಕ್ ಸೊಲಿಮ್ ಹೇಳಿದ್ದಾರೆ.
ಸೋಲಾರ್ ಶಕ್ತಿಯ ಜಾಗತಿಕ ಖರೀದಿದಾರರ ಸಂಘವನ್ನು ಸ್ಥಾಪಿಸಲು ಐಎಸ್‌ಎ ನೆರವಾಗಲಿದ್ದು ತಂತ್ರಜ್ಞಾನದ ದರವನ್ನು ಕಡಿಮೆಗೊಳಿಸಿ, ಸೋಲಾರ್ ಶಕ್ತಿಯ ಬಳಕೆಯನ್ನು ಹೆಚ್ಚಿಸಲಿದೆ ಎಂದು ಅವರು ತಿಳಿಸಿದ್ದಾರೆ. ಈ ಒಕ್ಕೂಟದಲ್ಲಿರುವ ಜನರಿಗೆ ಕಡಿಮೆ ದರದಲ್ಲಿ ಸೋಲಾರ್ ಶಕ್ತಿ ಲಭ್ಯವಾಗಲಿದೆ. ಅಲ್ಲದೆ ಅಧಿಕ ಉದ್ಯೋಗ, ಉತ್ತಮ ಸಂಬಳದ ಉದ್ಯೋಗ, ಉತ್ತಮ ಆರೋಗ್ಯ ಸೌಲಭ್ಯ ದೊರಕಲಿದೆ. ಭಾರತದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸೋಲಾರ್ ಸಾಮರ್ಥ್ಯ ಶೇ.370ರಷ್ಟು ಹೆಚ್ಚಳವಾಗಿದ್ದು ಇಂತಹ ಪ್ರಮುಖ ಜಾಗತಿಕ ಸಮ್ಮೇಳನದ ಆತಿಥೇಯತ್ವ ವಹಿಸಿಕೊಳ್ಳಲು ಭಾರತಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ ಎಂದು ತಾನು ಭಾವಿಸುವುದಾಗಿ ಅವರು ಹೇಳಿದರು.
ಫ್ರಾನ್ಸ್, ಆಸ್ಟ್ರೇಲಿಯಾ, ಶ್ರೀಲಂಕಾ ಸೇರಿದಂತೆ 23 ದೇಶಗಳ ಮುಖಂಡರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಉಪಪ್ರಧಾನಿ , ಇಂಧನ ಸಚಿವರು ಸೇರಿದಂತೆ ಹಲವು ರಾಷ್ಟ್ರಗಳ ಹಿರಿಯ ಪ್ರತಿನಿಧಿಗಳು ತಮ್ಮ ಭಾಗವಹಿಸುವಿಕೆಯನ್ನು ಖಾತರಿಪಡಿಸಿದ್ದಾರೆ . ಐಎಸ್‌ಎ ಶೃಂಗವು 121 ದೇಶಗಳ ನಡುವಿನ ಸೌರಶಕ್ತಿ ಒಪ್ಪಂದವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಚಿಸಲಾದ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರೋನ್ ಶೃಂಗಸಭೆಯ ಸಹ ಆತಿಥೇಯರಾಗಿದ್ದಾರೆ. ಗ್ರಾಮೀಣ ವಿದ್ಯುದೀಕರಣ, ನೀರು ಪೂರೈಕೆ ಮತ್ತು ನೀರಾವರಿ ಮುಂತಾದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೆ ಐಎಸ್‌ಎ ಸದಸ್ಯ ರಾಷ್ಟ್ರಗಳೊಳಗೆ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.







