ಭದ್ರತೆ, ಪರಮಾಣು ಸಹಕಾರ ಸಹಿತ 14 ಒಪ್ಪಂದಗಳಿಗೆ ಭಾರತ-ಫ್ರಾನ್ಸ್ ಸಹಿ

ಹೊಸದಿಲ್ಲಿ, ಮಾ.10: ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರೋನ್ ಮಧ್ಯೆ ನಡೆದ ದ್ವಿಪಕ್ಷೀಯ ಸಭೆಯ ಬಳಿಕ ಪರಮಾಣು ಸಹಕಾರ, ರಕ್ಷಣೆ ಸೇರಿದಂತೆ 14 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ.
ಶಿಕ್ಷಣ, ಪರಿಸರ, ನಗರ ಅಭಿವೃದ್ಧಿ, ರೈಲ್ವೇಸ್ ಹಾಗೂ ವರ್ಗೀಕೃತ ಮಾಹಿತಿಯ ರಕ್ಷಣೆ ಸೇರಿದಂತೆ 14 ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಸಭೆಯ ಬಳಿಕ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಮಾಕ್ರೋನ್, ಭಯೋತ್ಪಾದನೆ ಹಾಗೂ ಮೂಲಭೂತವಾದದ ಪಿಡುಗನ್ನು ಎದುರಿಸಲು ಉಭಯ ದೇಶಗಳು ಒಗ್ಗೂಡಿ ಕಾರ್ಯನಿರ್ವಹಿಸಲಿವೆ. ರಕ್ಷಣಾ ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳ ನಡುವಿನ ಸಹಕಾರ ಸಂಬಂಧ ಇದೀಗ ಇನ್ನಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಹೇಳಿದರು. ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಕ್ಷಣೆ ಮತ್ತು ಭದ್ರತೆಯ ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳ ನಡುವಿನ ಸಹಕಾರ ಸಂಬಂಧಕ್ಕೆ ಹೊಸ ಆಯಾ ಮ ದೊರೆತಿದೆ ಎಂದರು.
ಉಭಯ ನಾಯಕರ ನಡುವೆ ನಡೆದ ಸಭೆಯಲ್ಲಿ ಭಾರತ-ಪೆಸಿಫಿಕ್ ವಲಯದಲ್ಲಿ ಸಹಕಾರದ ಬಗ್ಗೆ ಕೂಡಾ ಚರ್ಚೆ ನಡೆಯಿತು.
ಶುಕ್ರವಾರ ರಾತ್ರಿ ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷರನ್ನು ವಿಮಾನ ನಿಲ್ದಾಣದಲ್ಲಿ ಎದುರುಗೊಂಡ ಪ್ರಧಾನಿ ಮೋದಿ ಸ್ವಾಗತ ಕೋರಿದರು. ಅಲ್ಲದೆ ದ್ವಿಪಕ್ಷೀಯ ಮಾತುಕತೆಗೂ ಮುನ್ನ ಹೊಸದಿಲ್ಲಿಯಲ್ಲಿರುವ ಹೈದರಾಬಾದ್ ನಿವಾಸಕ್ಕೆ ತೆರಳಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷರನ್ನು ಸ್ವಾಗತಿಸುವ ಮೂಲಕ ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧದ ನೂತನ ಅಧ್ಯಾಯಕ್ಕೆ ಮುನ್ನುಡಿ ಬರೆದರು ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಇಮ್ಯಾನುವೆಲ್ ಮಾಕ್ರೋನ್ ಭಾರತಕ್ಕೆ ನಾಲ್ಕು ದಿನಗಳ ಭೇಟಿ ನೀಡಿದ್ದಾರೆ.
ವರ್ಗೀಕೃತ ಮಾಹಿತಿಯ ರಕ್ಷಣೆ ಒಪ್ಪಂದ
ಭಾರತ-ಫ್ರಾನ್ಸ್ ನಡುವೆ ಸಹಿ ಹಾಕಲಾದ 14 ಒಪ್ಪಂದಗಳಲ್ಲಿ ವರ್ಗೀಕೃತ ಮಾಹಿತಿಯ ರಕ್ಷಣೆಯ ಒಪ್ಪಂದವೂ ಸೇರಿದೆ. ಭಾರತ- ಫ್ರಾನ್ಸ್ ನಡುವಿನ ರಫೇಲ್ ಯುದ್ಧವಿಮಾನ ಒಪ್ಪಂದದ ಮೊತ್ತವನ್ನು ಬಹಿರಂಗಪಡಿಸಲು ಭಾರತ ಸರಕಾರ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಈ ಒಪ್ಪಂದಕ್ಕೆ ಮಹತ್ವವಿದೆ.
ಫ್ರೆಂಚ್ ಅಧ್ಯಕ್ಷರ ಭಾರತ ಭೇಟಿಯ ಪ್ರಥಮ ದಿನ ಫ್ರಾನ್ಸ್ ಮತ್ತು ಭಾರತದ ಸಂಸ್ಥೆಗಳ ಮಧ್ಯೆ 16 ಬಿಲಿಯನ್ ಡಾಲರ್ (ಸುಮಾರು 1.04 ಲಕ್ಷ ಕೋಟಿ ರೂ.) ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಫ್ರಾನ್ಸ್‌ನ ಸಫ್ರಾನ್ ಸಂಸ್ಥೆಯು ಭಾರತಕ್ಕೆ ಏರ್‌ಲೈನ್ ಸ್ಪೈಸ್ ಜೆಟ್ ವಿಮಾನಗಳನ್ನು ಪೂರೈಸುವುದು, ಫ್ರಾನ್ಸ್‌ನ ಸೂಯೆಝ್ ಸಂಸ್ಥೆಯು ಕರ್ನಾಟಕದ ದಾವಣಗೆರೆಯಲ್ಲಿ ನೀರುಪೂರೈಕೆ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಒಪ್ಪಂದ ಸೇರಿದೆ.







