ಈ ವಿದ್ಯಾರ್ಥಿಗಾಗಿಯೇ ವಿಶೇಷ ಪರೀಕ್ಷಾ ವೇಳಾಪಟ್ಟಿ ಸಿದ್ಧಗೊಳಿಸಿದೆ ಸಿಬಿಎಸ್‌ಇ

ಹೊಸದಿಲ್ಲಿ,ಮಾ.10: ಮೆಕ್ಸಿಕೋದ ಗ್ವಾಡಾಲಾಜಾರ್‌ನಲ್ಲಿ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿರುವ 15ರ ಹರೆಯದ ಭಾರತದ ಯುವಶೂಟರ್,10ನೇ ತರಗತಿಯ ವಿದ್ಯಾರ್ಥಿಯಾಗಿರುವ ಅನೀಷ್ ಭನ್ವಾಲಾ ಅವರಿಗಾಗಿಯೇ ಸಿಬಿಎಸ್‌ಇ ವಿಶೇಷ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ಧಗೊಳಿಸಿದೆ. ಗ್ವಾಡಾಲಾಜಾರ್‌ನಿಂದ ನಸುಕಿನ ಎರಡು ಗಂಟೆಗೆ ಸ್ವದೇಶಕ್ಕೆ ವಾಪಸಾಗಲಿರುವ ಅವರು ಬೆಳಗಿನ ಜಾವ ಪರೀಕ್ಷೆಯನ್ನು ಬರೆಯಲಿದ್ದಾರೆ.
ಗ್ವಾಡಾಲಾಜಾರ್‌ನಿಂದ ಆಗಮನ ಮತ್ತು ಜ್ಯೂನಿಯರ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾದ ಸಿಡ್ನಿಗೆ ನಿರ್ಗಮನ ಇವುಗಳ ನಡುವಿನ ಆರು ದಿನಗಳ ಬಿಡುವಿನಲ್ಲಿ ಎರಡು ಪರೀಕ್ಷೆಗಳಿಗೆ ಅನೀಷ್ ಹಾಜರಾಗಲಿದ್ದಾರೆ.
ಅಭೂತಪೂರ್ವ ಕ್ರಮವೊಂದರಲ್ಲಿ ಅತ್ಯಂತ ಪ್ರತಿಭಾವಂತ ಬಾಲಕ ಅನೀಷ್‌ಗಾಗಿ ಮೂರು ಪರೀಕ್ಷೆಗಳ ವೇಳಾಪಟ್ಟಿಯನ್ನು ಮರುರೂಪಿಸಲು ಸಿಬಿಎಸ್‌ಇ ಒಪ್ಪಿಕೊಂಡಿದೆ. ಕ್ರೀಡಾಪಟುಗಳಿಗಾಗಿ ಇಂತಹ ಸೌಲಭ್ಯ ನಿಯಮವಾಗಬೇಕು ಎಂದು ಅನೀಷ್ ತಂದೆ ಜಗಪಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓದು ಮತ್ತು ಕ್ರೀಡೆಗಳ ನಡುವೆ ಆಯ್ಕೆಯು ವಿದ್ಯಾರ್ಥಿಗಳ ಪಾಲಿಗೆ ತೀವ್ರ ಬಿಕ್ಕಟ್ಟನ್ನುಂಟು ಮಾಡುತ್ತದೆ ಎಂದು ಹೇಳಿದ ಜಗಪಾಲ್, ಈ ಬಿಕ್ಕಟ್ಟನಿಂದ ಪಾರಾಗಲು ತಮ್ಮ ಪುತ್ರನಿಗೆ ನೆರವು ಕೋರಿ ಹಲವಾರು ಅಧಿಕಾರಿಗಳ ಮೊರೆ ಹೋಗಿದ್ದರು.
ಅನೀಷ್ ಗ್ವಾಡಾಲಾಜಾರ್‌ನಲ್ಲಿ ಪುರುಷರ ಶೂಟಿಂಗ್ ಪಂದ್ಯಾವಳಿಯ 25 ಮೀ.ರ್ಯಾಪಿಡ್ ಫೈರ್ ಪಿಸ್ತೂಲಿನಲ್ಲಿ ಅಂತಿಮ ಘಟ್ಟವನ್ನು ತಲುಪಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಿಂದ ಅವರು ಎಪ್ರಿಲ್‌ನಲ್ಲಷ್ಟೇ ವಾಪಸಾಗಲಿದ್ದು, ಎ.16,17 ಮತ್ತು 18ರಂದು ಹಿಂದಿ, ಸಮಾಜ ವಿಜ್ಞಾನ ಮತ್ತು ಗಣಿತ ಪರೀಕ್ಷೆಗಳನ್ನು ಬರೆಯಲು ಸಿಬಿಎಸ್‌ಇ ಅವರಿಗೆ ವಿಶೇಷ ಅವಕಾಶವನ್ನು ಕಲ್ಪಿಸಿದೆ.
ಅನೀಷ್‌ರ ಮೊರೆಯ ಮೇರೆಗೆ ಭಾರತೀಯ ಕ್ರೀಡಾ ಪ್ರಾಧಿಕಾರವು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಈ ನಿರ್ಧಾರವನ್ನು ಕೈಗೊಂಡಿದೆ.







