ಬೆಂಗಳೂರು: ನಾರಿಮನ್ ಬದಲಿಸಲು ಕರ್ನಾಟಕ ಜಲ ವೇದಿಕೆ ಆಗ್ರಹ
ಬೆಂಗಳೂರು, ಮಾ.10: ಕಾವೇರಿ ನದಿ ನೀರು ಹಂಚಿಕೆ ವಿಚಾರ ಸಂಬಂಧ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ವಿಫಲರಾಗಿರುವ ವಕೀಲ ನಾರಿಮನ್ ಅವರನ್ನು ಬದಲಿಸಬೇಕು ಎಂದು ಕರ್ನಾಟಕ ಜಲ ವೇದಿಕೆ ಆಗ್ರಹಿಸಿದೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಲ ತಜ್ಞ ಅರ್ಜುನಹಳ್ಳಿ ಪ್ರಸನ್ನ ಕುಮಾರ್, ಕರ್ನಾಟಕ ಮತ್ತು ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಮಾಧಾನಕರವಾಗಿಲ್ಲ. ಇದರಿಂದ ಮುಂದೆ ಕಾವೇರಿ ಮತ್ತು ಅದರ ಉಪನದಿಗಳ ನೀರನ್ನು ಬಳಸುವುದಿರಲಿ ಮುಟ್ಟದಂತಾಗುವ ಸಾಧ್ಯತೆಗಳು ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಜಲ ಪಂಚಾಯತ್ ಎದುರೇ ವಾದ ಮಾಡಿ ಸೌಲಭ್ಯ ಪಡೆಯುವ ಅವಕಾಶವಿತ್ತು. ಆದರೆ, ವಕೀಲ ನಾರಿಮನ್ ಅವರು ಇದ್ದ ಆ ಅವಕಾಶದ ಬಾಗಿಲನ್ನೂ ಮುಚ್ಚಿದ್ದಾರೆ. ಇನ್ನು ನ್ಯಾಯಾಲಯದ ಆದೇಶ ಬಂದ ಬಳಿಕ ಜಲ ಪಂಚಾಯಿತಿ ವಿಸರ್ಜನೆ ಆಗಿದೆ. ಇದೀಗ ಕೇಂದ್ರ ಸರಕಾರ ಎಲ್ಲ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದು ಜಾರಿ ಸಮಿತಿ ರಚನೆಗೆ ಮುಂದಾಗಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನ ನಿಬಂಧನೆಗಳು ಮತ್ತು ಜಾರಿ ಸಮಿತಿ ರಚನೆಯ ಆದೇಶ ಪರಿಸ್ಕೃತ ಆಗದಿದ್ದಲ್ಲಿ ಕೃಷಿ ಇರಲಿ, ಕುಡಿಯುವ ನೀರಿನ ಭವಣೆಗೆ ಇಡೀ ಕಾವೇರಿ ಕಣಿವೆ ಈಡಾಗಲಿದೆ. ಇದರಿಂದ ಬೆಂಗಳೂರು ನಗರಕ್ಕೆ ನೀರು ಪೂರೈಸಲು ತೀವ್ರ ಸಮಸ್ಯೆ ಎದುರಾಗಲಿದೆ ಎಂದು ಅವರು ಹೇಳಿದರು.
1924ರಿಂದಲೂ ಕಾವೇರಿ ನದಿ ನೀರು ವಿಚಾರವಾಗಿ ರಾಜ್ಯದ ವಕೀಲರು ಅವೈಜ್ಞಾನಿಕವಾಗಿ ವಿಚಾರ ಮಂಡಿಸುತ್ತಲೇ ಬಂದಿದ್ದು, ಇದರಿಂದ ನಮ್ಮ ನೀರಿಗೆ ನಾವೇ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.







