ಬೆಂಗಳೂರು: ಬೇರ್ಪಟ್ಟಿದ್ದ ಮುಂಗೈಯ ಯಶಸ್ವಿ ಮರು ಜೋಡಣೆ

ಬೆಂಗಳೂರು, ಮಾ.10: ಅಪಘಾತದಲ್ಲಿ ತೀವ್ರಗಾಯಗೊಂಡು ಬೇರ್ಪಟ್ಟಿದ್ದ ಮಹಿಳೆಯ ಮುಂಗೈಯನ್ನು ಮರು ಜೋಡಣೆ ಮಾಡುವಲ್ಲಿ ನಗರದ ಮಲ್ಲಿಗೆ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ಕಳೆದ ಕೆಲದಿನಗಳ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರಿಗೆ ಅಪಘಾತವಾಗಿ ಮುಂಗೈ ತುಂಡಾಗಿತ್ತು. ಈ ವೇಳೆ ದೇಹದಿಂದ ಬೇರ್ಪಟ್ಟಿದ್ದ ಅಂಗವನ್ನು ಸುರಕ್ಷತಾ ಕ್ರಮ ವಹಿಸಿ ಆಸ್ಪತ್ರೆಗೆ ತಂದು ಮಹಿಳೆಯನ್ನು ದಾಖಲು ಮಾಡಲಾಗಿತ್ತು.
ಮಲ್ಲಿಗೆ ಆಸ್ಪತ್ರೆಯ ತಜ್ಞ ವೈದ್ಯ ಡಾ.ಮಹೇಶ್, ಡಾ.ಮಂಜುನಾಥ್ ಕುಮಾರ್, ಡಾ.ವೆಂಕಟರಾಜ್ ಹಾಗೂ ಮತ್ತವರ ತಂಡ ನಾಲ್ಕು ಘಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಮುಂಗೈ ಮರು ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದೇಹದಿಂದ ಬೇರ್ಪಟ್ಟ ಭಾಗಗಳನ್ನು ಜೋಡಿಸುವುದು ಸವಾಲಿನ ಕೆಲಸ. ಆದರೆ ನಮ್ಮ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರ ತಂಡ ತೀವ್ರಗಾಯವಾದ ಮುಂಗೈ ಭಾಗವನ್ನು ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆಂದು ಮಲ್ಲಿಗೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಶ್ರೀರಾಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





