ಚಿತ್ರಕಲೆ ಮನೋವಿಕಾಸಕ್ಕೆ ಪೂರಕ: ಮಂಜುನಾಥ ಅಯ್ಯಪ್ಪ

ಬೆಂಗಳೂರು, ಮಾ.10: ಮಕ್ಕಳ ಮನೋವಿಕಾಸಕ್ಕೆ ಚಿತ್ರಕಲೆ ಪೂರಕವಾಗಿದ್ದು, ಮಾನಸಿಕ ಒತ್ತಡಗಳಿಂದ ಮುಕ್ತರಾಗಿ ಪರೀಕ್ಷೆಗಳನ್ನು ಉತ್ಸುಕತೆಯಿಂದ ಬರೆಯಲು ಸಹಕಾರಿಯಾಗುತ್ತದೆ ಎಂದು ಕಲಾವಿದ ಮಂಜುನಾಥ ಅಯ್ಯಪ್ಪ ಅಭಿಪ್ರಾಯಿಸಿದರು.
ಶನಿವಾರ ಹೈವೇ ಕನ್ನಡ ಕಲಾ ಸಂಸ್ಥೆ (ರಿ) ಆಯೋಜಿಸಿದ್ದ ವಸಂತ ವರ್ಣ ಎಂಬ ಚಿತ್ರಕಲಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪರೀಕ್ಷೆಗಳು ಆರಂಭಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಚಿತ್ರಕಲೆಯು ಮಕ್ಕಳಿಗೆ ಹೊಸ ಹುರುಪು ತರುತ್ತದೆ. ಆ ಮೂಲಕ ಮಕ್ಕಳ ಪರೀಕ್ಷಾ ತಯಾರಿಗೆ ತುಂಬಾ ಸಹಕಾರಿಯಾಗುವ ಪ್ರಕ್ರಿಯೆ ಇದಾಗಿದೆ ಎಂದರು.
ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಲು ಹೈವೇ ಕನ್ನಡ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ಶ್ರಮಿಸುತ್ತಿದೆ. ಸರಕಾರಿ ಶಾಲೆಗಳು, ಇಂತಹ ಚಟುವಟಿಕೆಗಳಿಗೆ ಸರಕಾರಕ್ಕೆ ಕೈಚಾಚದಂತೆ ಮಾಡುವಲ್ಲಿ ಇಂತಹ ಸಂಸ್ಥೆಗಳ ಪಾತ್ರ ಬಹಳ ದೊಡ್ಡದು. ಜತೆಗೆ ನಮ್ಮ ಶ್ರಮವನ್ನೂ ತಗ್ಗಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತೀರ್ಪುಗಾರರಾದ ಆರ್.ವಿ.ಕಾರ್ಪೆಂಟರ್ ಮಾತನಾಡಿ, ಚಿತ್ರಕಲೆಯು ಮಕ್ಕಳ ಮನಸ್ಸಿನ ಪ್ರತಿಬಿಂಬವಾಗಿದೆ. ಮಾತಿನಲ್ಲಿ ಹೇಳಲು ಆಗದ ಅವರ ಭಾವನೆಗಳನ್ನು ಚಿತ್ರಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಇದು ಮಾನವ ವಿಕಾಸದಲ್ಲಿ ಅಕ್ಷರ ಬಳಕೆಗಿಂತಲೂ ಪರಿಣಾಮಕಾರಿಯಾದದ್ದೆಂದು ತಿಳಿಸಿದರು.
ಶಿಕ್ಷಕಿ ಮೇರಿಶೈಲಾ, ಅತಿಥಿ ಶಿಕ್ಷಕಿ ಪ್ರಮೀಳಾ, ರಂಗಕರ್ಮಿ ಸೂರ್ಯಕುಮಾರಿ, ಹೈವೇ ಕನ್ನಡ ಸಂಸ್ಥೆಯ ಕಾರ್ಯದರ್ಶಿ ರಮಣಿ, ಶಾಲೆಯ ಅಡುಗೆ ಸಹಾಯಕಿ ಗೌರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಎಲ್ಲಾ 80 ಮಕ್ಕಳೂ ಶಿಬಿರದಲ್ಲಿ ಭಾಗವಹಿಸಿ, ಚಿತ್ರ ರಚಿಸಿದರು.
ಟ್ರಾಫಿಕ್ ಸಿಗ್ನಲ್‌ಅನ್ನು ಚಿತ್ರಿಸಿದ್ದ 2ನೆ ತರಗತಿಯ ಸ್ವೀಟಿಕುಮಾರಿ ಮೊದಲ ಬಹುಮಾನ ಪಡೆದರೆ, ನಿತ್ಯಬಳಕೆಯ ಸಂದರ್ಭಗಳನ್ನು ಚಿತ್ರಿಸಿದ್ದ 5ನೆ ತರಗತಿಯ ಚೆಗುವಾರ 2ನೆ ಬಹುಮಾನವನ್ನು, ಅನೇಕ ಬಣ್ಣಗಳನ್ನು ಮಿಳಿತಗೊಳಿಸಿ ಆಕೃತಿ ರೂಪಿಸಿದ್ದ 2ನೆ ತರಗತಿಯ ಜಗದೀಶ್‌ಗೆ ಮೂರನೆ ಬಹುಮಾನ ಲಭಿಸಿತು.
ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ ವತಿಯಿಂದ ನಗರದ ದೊಮ್ಮಲೂರಿನ ಕ್ಲಬ್‌ನಲ್ಲಿ ಒಂಭತ್ತು ದಿನಗಳ ಕಾಟೇಜ್ ಮೇಳ ಆಯೋಜಿಸಲಾಗಿದೆ. ಸಿಸಿಐಇನ ಎಜಿಎಂ ಎಸ್. ಇನಾಯತ್ ಶಾ ಸೇರಿದಂತೆ ಪ್ರಮುಖರು ಮೇಳದಲ್ಲಿ ಭಾಗವಹಿಸಿದ್ದರು.







