ರಿಕ್ಷಾದಲ್ಲಿ ಗಾಂಜಾ ಸಾಗಾಟ ಪತ್ತೆ: ಸೊತ್ತು ಸಹಿತ ಆರೋಪಿ ಸೆರೆ
ಪುತ್ತೂರು, ಮಾ. 10: ಅಟೋ ರಿಕ್ಷಾವೊಂದರಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪುತ್ತೂರು ನಗರ ಪೊಲೀಸರು ಶನಿವಾರ ಪುತ್ತೂರು ನಗರದ ಹೊರವಲಯದ ಕಬಕ ಸಮೀಪ ಪತ್ತೆ ಮಾಡಿ ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಸೂರಿಕುಮೇರು ನಿವಾಸಿ ಅಬ್ದುಲ್ ಸಮಾದ್ (25) ಬಂಧಿತ ಆರೋಪಿ. ಪುತ್ತೂರು ನಗರ ಠಾಣೆಯ ಎಸ್‌ಐ ಅಜೇಯ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಖಚಿತ ಮಾಹಿತಿಯ ಮೇರೆಗೆ ಶನಿವಾರ ಬೆಳಗ್ಗೆ ಮಾಣಿ ಕಡೆಯಿಂದ ಕಬಕ ಕಡೆಗೆ ಬರುತ್ತಿದ್ದ ರಿಕ್ಷಾವನ್ನು ಕಬಕ ಸಮೀಪ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ರಿಕ್ಷಾದಲ್ಲಿ ಗಾಂಜಾ ಪತ್ತೆಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಗಾಂಜಾ ಮತ್ತು ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಚೋಳಪ್ಪ, ಕಿರಣ್,ಮೋಹನ್ ಮತ್ತು ಜಗದೀಶ್ ಅವರು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಶನಿವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.





