'ಸಾನಿಧ್ಯ ಉತ್ಸವ -ವಿಶನ್ -2018' ಕದ್ರಿ ಉದ್ಯಾನವನದಲ್ಲಿ ಉದ್ಘಾಟನೆ
ಮಂಗಳೂರು, ಫೆ.10: ಸಾನಿಧ್ಯ ಭಿನ್ನ ಸಾಮಥ್ಯದ ವಸತಿ ಶಾಲೆಯ ಮಕ್ಕಳ ಕಲೆ ಮತ್ತು ವಿಶೇಷ ಕಾರ್ಯಕ್ರಮಗಳನ್ನೊಳಗೊಂಡ ಎರಡು ದಿನಗಳ ವಿಶನ್ -2018ನ್ನು ಉದ್ಯಮಿ ಮುಕುಂದ ಕಾಮತ್ ನಗರದ ಕದ್ರಿ ಉದ್ಯಾನವನದಲ್ಲಿಂದು ಉದ್ಘಾಟಿಸಿದರು.
ಶಿಕ್ಷಣ ಕ್ಷೇತ್ರ ವಾಣಿಜ್ಯೀಕರಣ ಗೊಳ್ಳುತ್ತಿರುವ ಈ ಹಂತದಲ್ಲಿ ಸಾನಿಧ್ಯ ಶಾಲೆಯಂತಹ ಭಿನ್ನ ಸಾಮಥ್ಯದ ಮಕ್ಕಳ ಶಾಲೆ ಯನ್ನು ನಡೆಸುವುದು ಒಂದು ಸವಾಲು .ಇಂತಹ ಸಂಸ್ಥೆಗಳಿಗೆ ಸಮಾಜದಲ್ಲಿ ಸ್ಥಿತಿವಂತರು ಸಹಾಯ ನೀಡಬೇಕಾದ ಹೊಣೆಗಾರಿಕೆ ಇದೆ ಎಂದು ಮುಕುಂದ ಕಾಮತ್ ಶುಭ ಹಾರೈಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಉಪ ನಿರ್ದೇಶಕಿ ಯಮುನಾ ಡಿ ಮಾತನಾಡುತ್ತಾ, ಭಿನ್ನ ಸಾಮರ್ಥ್ಯದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಸಾನಿಧ್ಯದ ವತಿಯಿಂದ ಹಮ್ಮಿಕೊಂಡ ವಿಶನ್ 2018 ಕಾರ್ಯಕ್ರಮ ಮಹತ್ವದ್ದಾಗಿದೆ. ಸರಕಾರದಿಂದ 25 ವರ್ಷದವರೆಗಿನ ಭಿನ್ನ ಸಾಮರ್ಥ್ಯದ ಮಕ್ಕಳ ಶಿಕ್ಷಣ ಹಾಗೂ ವಸತಿಗೆ ನೆರವು ದೊರೆಯುತ್ತದೆ. ಉಳಿದಂತೆ 25 ವರ್ಷ ಕಳೆದ ಭಿನ್ನ ಸಾಮಥ್ಯದ ಯುವಕ ಯುವತಿಯರಿಗೆ ಆಶ್ರಯ ನೀಡಲು ಸರಕಾರದ ನೆರವು ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಆಡಳಿತಾಧಿಕಾರಿ ವಸಂತ್ ಶೆಟ್ಟಿ ಮಾತನಾಡುತ್ತಾ, 2003ರಲ್ಲಿ ಗಣೇಶ್ ಟ್ರಸ್ಟ್ ಮೂಲಕ ಆರಂಭವಾದ ಈ ಭಿನ್ನ ಸಾಮಥ್ಯದ ಮಕ್ಕಳ ಶಾಲೆಯಲ್ಲಿ ಪ್ರಸಕ್ತ 160 ಮಕ್ಕಳು, 2 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ ಸಮಾಜದ ದಾನಿಗಳ ಸಹಕಾರದಿಂದ , ಸರಕಾರದ ಸಹಾಯದಿಂದ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. 25ವರ್ಷ ದಾಟಿದ ಭಿನ್ನ ಸಾಮರ್ಥ್ಯದ ಯುವಕ ಯುವತಿಯರಿಗೆ ಸರಕಾರದಿಂದಲೂ ನೆರವು ದೊರೆಯುತ್ತಿಲ್ಲ . ಈ ವಯೋಮಾನದವರಿಗೆ ಸರಕಾರದ ನೆರವಿನ ಅಗತ್ಯವಿದೆ .ಪ್ರಸಕ್ತ ಸಾನಿಧ್ಯದಲ್ಲಿ ಎಲ್ಲಾ ವಯೋಮಾನದವರಿಗಾಗಿ ನಿರ್ಮಿಸುವ ಶಾಶ್ವತ ವಸತಿ ಸಹಿತದ ಕಟ್ಟಡ ಯೋಜನೆ ಹಮ್ಮಿಕೊಳ್ಳಲಾಗಿದೆ. ಸಾನಿಧ್ಯ ಶಾಲೆಯ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಸಲುವಾಗಿ ಅವರನ್ನು ಮುಖ್ಯ ವಾಹಿನಿಗೆ ತರಲು ಸಾನಿಧ್ಯ ಉತ್ಸವ ವಿಶನ್ 2018 ಎರಡು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಸಂತ ಶೆಟ್ಟಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾನಿಧ್ಯ ಸಂಸ್ಥೆಯ ಸದಸ್ಯರು ನಿರ್ಮಿಸಿದ ಕರಕುಶಲ ಕಲೆಗಳ ಪ್ರದರ್ಶನ ಮಾರಾಟ ಮಳಿಗೆಯನ್ನು ಉದ್ಘಾಟಿಸಲಾಯಿತು. ಮಾ.11ರಂದು 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ. ಸಮಾರಮಭದಲ್ಲಿ ಮನಪಾ ಮಾಜಿ ಮೇಯರ್ ಮಹಾಬಲ ಮಾರ್ಲ ಹಾಗೂ ಗಣೇಶ್ ಸೇವಾ ಟ್ರಸ್ಟ್‌ಸದಸ್ಯರು ಉಪಸ್ಥಿತರಿದ್ದರು.







