ಮಂಡ್ಯ: ಮನೆಮನೆಗೆ ಕುಮಾರಣ್ಣ ಅಭಿಯಾನ

ಮಂಡ್ಯ, ಮಾ.10: ನಗರದ ಸ್ವರ್ಣಸಂದ್ರ ಬಡಾವಣೆಯ 32 ಹಾಗೂ 33ನೆ ವಾರ್ಡಿನಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಶನಿವಾರ ಮನೆಮನೆಗೆ ಕುಮಾರಣ್ಣ ಅಭಿಯಾನ ನಡೆಸಲಾಯಿತು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನ್ನು ಅಧಿಕಾರಕ್ಕೆ ತಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಈ ಸಂದರ್ಭದಲ್ಲಿ ಶ್ರೀನಿವಾಸ್ ತಿಳಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳಲ್ಲಿ ಜಾರಿಗೊಳಿಸಿದ ಹಲವು ಜನಪರ, ರೈತಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವುದು, ಚುನಾವಣಾ ಪ್ರಣಾಳಿಕೆಗೆ ಸಿದ್ಧಪಡಿಸಿರುವ ಅಂಶಗಳನ್ನು ಪ್ರಚುರಪಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ರೈತರು, ಕೃಷಿ ಕ್ಷೇತ್ರದ ಅಭ್ಯುದಯವನ್ನು, ಮಹಿಳೆಯರು, ವೃದ್ಧರು, ವಿಶೇಷ ಚೇತನರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವುದನ್ನು ಧ್ಯೇಯವಾಗಿಸಿಕೊಂಡಿರುವ ಜೆಡಿಎಸ್‍ಗೆ ಜನರು ಚುನಾವಣೆಯಲ್ಲಿ ಆಶೀರ್ವದಿಸಬೇಕು ಎಂದು ಅವರು ಮನವಿ ಮಾಡಿದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಎಸ್.ಪಿ.ಗೌರೀಶ್, ತಿಮ್ಮೇಗೌಡ, ಡಾ.ಎಚ್.ಕೃಷ್ಣ, ಎಸ್.ಡಿ.ಜಯರಾಂ, ಸಿದ್ದರಾಮೇಗೌಡ, ಜಯಶೀಲಮ್ಮ, ವತ್ಸಲ, ನಾಗರತ್ನ, ಸುಮಿತ್ರ, ಮಂಜುಳ ಉದಯಶಂಕರ್, ಶಿವರಾಮು, ಕೃಷ್ಣ, ಸುಮಿತ್ರಾ ಶಂಕರ್, ಇತರರು ಭಾಗವಹಿಸಿದ್ದರು.