ಸಂವಿಧಾನ ಬದಲಾವಣೆಗೆ ಜನರು ಆಸ್ಪದ ನೀಡಬಾರದು: ಸಂಸದ ಸಿ.ಎಸ್.ಪುಟ್ಟರಾಜು

ಮಂಡ್ಯ, ಮಾ.10: ವಿಶ್ವಜ್ಞಾನಿ ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಬದಲಾಯಿಸುವ ದುಸ್ಸಾಹಸಕ್ಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಜನರು ಅದಕ್ಕೆ ಆಸ್ಪದ ನೀಡಬಾರದು ಎಂದು ಸಂಸದ ಸಿ.ಎಸ್.ಪುಟ್ಟರಾಜು ಕರೆ ನೀಡಿದ್ದಾರೆ.
ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಅತ್ಯುತ್ತಮ ಸಂವಿಧಾನವನ್ನೇ ಬದಲಾಯಿಸುವಂತಹ ದುಸ್ಸಾಸಕ್ಕೆ ಕೈಹಾಕುವಷ್ಟರ ಮಟ್ಟಿಗೆ ಇಂದಿನ ರಾಜಕಾರಣ ಕಲುಷಿತಗೊಂಡಿದೆ. ಇಂತಹ ಬೆಳವಣಿಗೆಗಗಳಿಗೆ ಯಾವುದೇ ಆಸ್ಪದ ಕೊಡಬಾರದು ಎಂದು ಅವರು ಸಲಹೆ ನೀಡಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ಜನಾಂಗ, ಧರ್ಮದವರು ಸರಿಸಮನಾಗಿ ಬಾಳಬಹುದು ಎನ್ನುವುದನ್ನು ಸಂವಿಧಾನದಲ್ಲಿ ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ಬೆರಳೆಣಿಕೆಯಷ್ಟಿರುವ ಕೆಲವರು ತಾವೇ ಬುದ್ಧಿವಂತರು, ಶ್ರೇಷ್ಠರೆಂದು ಭಾವಿಸಿಕೊಂಡು ಸಮಾಜವನ್ನು ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಮಾಜಿ ಸಚಿವ ಎಚ್.ವಿಶ್ವನಾಥ್ ಮಾತನಾಡಿ, ಲೆನಿನ್, ಪೆರಿಯಾರ್, ಅಂಬೇಡ್ಕರ್, ಗಾಂಧೀಜಿ ಪ್ರತಿಮೆಗಳನ್ನು ನೆಲಸಮಗೊಳಿಸಬಹುದೇ ಹೊರತು ಅವರ ಸಿದ್ದಾಂತ, ಮಾನವತಾವಾದವನ್ನು ನಾಶಗೊಳಿಸುವುದು ಸಾಧ್ಯವಿಲ್ಲ ಎಂದರು.
ಅಂಬೇಡ್ಕರ್ ದಲಿತರು, ದುರ್ಬಲರಿಗೆ ಹೋರಾಟದ ಮನೋಭಾವ ಮೂಡಿಸದಿದ್ದರೆ ದೇಶದಲ್ಲಿ ಕೊಲೆ, ಸುಲಿಗೆ ಹೆಚ್ಚಾಗಿ ದೀನದಲಿತರು ಮತ್ತು ಸ್ವಾತಂತ್ರ್ಯ ಹಾಳಾಗಿ ಹೋಗುತ್ತಿತ್ತು. ಜಾತಿ, ಧರ್ಮ ನಡುವಿನ ಹೋರಾಟದ ಪ್ರಸ್ತುತ ಪರಿಸ್ಥಿತಿಯಲ್ಲಿ ಸಂವಿಧಾನವನ್ನು ಅರ್ಥೈಸುವ ಕೆಲಸವನ್ನು ಸರಕಾರಗಳು ಮಾಡಬೇಕಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಕೆ.ಪಿ.ಮಹಾಲಿಂಗು ಕಲ್ಕುಂದ ಸಬತ ಅವರ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಹಾಗೂ ಹೊಲದೊಡೆಯ (ಆತ್ಮಕಥನ) ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್, ಜಿಪಂ ಪ್ರಭಾರ ಅಧ್ಯಕ್ಷೆ ಗಾಯಿತ್ರಿ ರೇವಣ್ಣ, ನಗರಸಭಾ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಜೆಡಿಎಸ್ ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಡಿ.ಜಯರಾಂ, ಮುಡಾ ಅಧ್ಯಕ್ಷ ಮುನಾವರ್‍ಖಾನ್, ಹಿರಿಯ ದಸಂಸ ಮುಖಂಡ ಹರಿಹರ ಆನಂದಸ್ವಾಮಿ, ಜೆಡಿಎಸ್ ಮುಖಂಡ ಕೀಲಾರ ರಾಧಾಕೃಷ್ಣ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಹೇಶ್‍ಚಂದ್ರಗುರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್, ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಇತರ ಗಣ್ಯರು ಉಪಸ್ಥಿತರಿದ್ದರು.







