ಹನೂರು: ಆದಿದೇವತೆ ಬೆಟ್ಟಳ್ಳಿ ಮಾರಮ್ಮ ದೇವಿಯ ತೆಪ್ಪೋತ್ಸವ
.jpg)
ಹನೂರು,ಮಾ.10: ಪಟ್ಟಣದ ಆದಿದೇವತೆ ಬೆಟ್ಟಳ್ಳಿ ಮಾರಮ್ಮ ದೇವಿಯ ತೆಪ್ಪೋತ್ಸವವು ಪಟ್ಟಣದ ಹೊರವಲಯದ ರುದ್ರಶೆಟ್ಟಿ ದೊಡ್ಡಿ ಕೆರೆಯಲ್ಲಿ ವಿಜೃಂಭಣೆಯಿಂದ ಜರುಗಿತು.
ಪಟ್ಟಣದಲ್ಲಿ ಜಾತ್ರಾ ಮಹೋತ್ಸವವು ಮುಕ್ತಾಯದ ಬಳಿಕ ಪ್ರತೀತಿಯಂತೆ ಮಾರಮ್ಮನ ತವರು ಮನೆ ಎಂದು ಕರೆಯಲ್ಪಡುವ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ತೆಪ್ಪೋತ್ಸವ ಮತ್ತು ಮೆರವಣಿಗೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ ಕುದುರೆ ವಾಹನದ ಮೇಲೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾಲಂಕಾರಗಳಿಂದ ಸಿಂಗರಿಸಿ ಮೆರವಣಿಗೆ ಮೂಲಕ ರುದ್ರಶೆಟ್ಟಿ ಕೆರೆಗೆ ಕೊಂಡೊಯ್ಯಲಾಯಿತು. ಬಳಿಕ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಿ ತೆಪ್ಪೋತ್ಸವ ನಡೆಸಲಾಯಿತು. ಈ ವೇಳೆ ಗ್ರಾಮಸ್ಥರೆಲ್ಲಾ ತಂಪುಜ್ಯೋತಿ ಸಮರ್ಪಿಸಿ ಪೂಜೆ ನೆರವೇರಿಸಿದರು.
ಬಳಿಕ ಗ್ರಾಮದ ಎಲ್ಲಾ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿ ಪ್ರತಿ ಮನೆಯಲ್ಲಿಯೂ ಪೂಜೆ ನೆರವೇರಿಸಲಾಯಿತು. ಬಳಿಕ ಶನಿವಾರ ಮಧ್ಯಾಹ್ನದ ವೇಳೆಗೆ ಉತ್ಸವಮೂರ್ತಿಯನ್ನು ಮುಖ್ಯ ರಸ್ತೆ ಮಾರ್ಗವಾಗಿ ಬೆಟ್ಟಳ್ಳಿ ಮಾರಮ್ಮ ದೇವಾಲಯಕ್ಕೆ ಹೊತ್ತು ತರಲಾಯಿತು.
`





