ಕಾಂಗ್ರೆಸ್ ಸರಕಾರ ಅಕ್ಷರ, ಅನ್ನ, ಆರೋಗ್ಯ, ವಸತಿ ಉಚಿತವಾಗಿ ನೀಡಿದೆ: ಶಾಸಕ ಶಿವರಾಮ ಹೆಬ್ಬಾರ
.jpg)
ಮುಂಡಗೋಡ,ಮಾ.10 : ಕಾಂಗ್ರೆಸ್ ಸರಕಾರ ಬಡತನ, ಅನಕ್ಷರತೆ ಹಾಗೂ ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ಆ ನಿಟ್ಟಿನಲ್ಲಿ ಸಾಗುತ್ತಿದೆ ಎಂದು ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ಹೇಳಿದರು
ಅವರು ಶನಿವಾರ ಪಟ್ಟಣದ ಟೌನ್‍ಹಾಲ್ ನಲ್ಲಿ ಕಂದಾಯ, ಕೃಷಿ ಹಾಗೂ ಸಮಾಜ ಕಲ್ಯಾಣ ಹಮ್ಮಿಕೊಂಡಿದ್ದ ಇಲಾಖೆಗಳ ವಿವಿಧ ಯೋಜನೆಗಳ ಸಹಾಧನ, ವಸತಿಯೋಜನೆ ಪಟ್ಟಾ ಹಾಗೂ ಅರಣ್ಯ ಅತೀಕ್ರಮಣದಾರರಿಗೆ ಹಕ್ಕು ಪತ್ರ ವಿತರಣ ಕಾರ್ಯಕ್ರಮದಲ್ಲಿ ಪಟ್ಟಾ ವಿತರಣೆ ಮಾಡಿ ಮಾತನಾಡಿದರು
ಅಕ್ಷರ, ಅನ್ನ, ಆರೋಗ್ಯ ಹಾಗೂ ವಸತಿ ಇವೆಲ್ಲವೂ ಉಚಿತವಾಗಿ ದೊರೆಯುವುದರಿಂದ ರಾಜ್ಯವು ಹಸಿವು, ಅನಕ್ಷರತೆ, ಅನಾರೋಗ್ಯ ಹಾಗೂ ವಸತಿ ಹೀನ ಮುಕ್ತವಾಗುತ್ತಿದೆ. ಆರೋಗ್ಯಕ್ಕಾಗಿ ಒಂದು ಕುಟುಂಬಕ್ಕೆ 1ಲಕ್ಷ 50 ಸಾವಿರ ರೂ ವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಬಹುದಾಗಿದೆ. ಈ ಯೋಜನೆ ದೇಶದಲ್ಲಿಯೇ ಪ್ರಥಮ ಎಂದರು
2013 ರ ಪೂರ್ವದ 8 ವರ್ಷಗಳಲ್ಲಿ ಜೆಡಿಎಸ್ ಸಮ್ಮಿಶ್ರ ಸರಕಾರದ ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ ಹಾಗು ಜಗದೀಶ ಶೆಟ್ಟರ ಅರಣ್ಯ ಅತಿಕ್ರಮಣದಾರರಿಗೆ ಸ್ಪಂದಿಸಲಿಲ್ಲ. ನಮ್ಮ ಸರಕಾರ ಬಂದು ಅತಿಕ್ರಮಣದಾರರಿಗೆ ಪಟ್ಟ ವಿತರಣೆ ಮಾಡುತ್ತಿದೆ. ನಮ್ಮ ಸರಕಾರ ರಾಜ್ಯದಲ್ಲಿ ಯಾರೂ ವಸತಿ ಹೀನರಾಗಬಾರದು ಎಂಬುದು ಹಾಗೂ ಗುಡಿಸಲು ರಹಿತ ವಾಗಬೇಕು ಎಂಬ ಧ್ಯೇಯದೊಂದಿಗೆ ಸಾಗುತ್ತಿದೆ. ಆ ಪ್ರಕಾರ ನಾವು ನಡೆದು ಕೊಳ್ಳುತ್ತಿದ್ದೇವೆ. ಐದು ವರ್ಷದಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಸುಮಾರು 6000 ಕ್ಕಿಂತ ಹೆಚ್ಚಿನ ಮನೆಗಳನ್ನು ನೀಡಿದ್ದೇವೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವ ನಮ್ಮ ಸರಕಾರ, ಶಿಕ್ಷಣ ಶ್ರೀಮಂತರ ಸೊತ್ತಾಗಬಾರದು ಎಂದು ಹೆಣ್ಣು ಮಕ್ಕಳಿಗೆ ಪಿಯುಸಿದಿಂದ ಹಿಡಿದು ಪೊಸ್ಟ್ ಗ್ರ್ಯಾಜುಶನ್ ತನಕ ಉಚಿತ ವಿದ್ಯಾಭ್ಯಾಸ, ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ, ಮಕ್ಕಳ ಆರೋಗ್ಯ ಸುಧಾರಿಸಲು ಕ್ಷೀರಭಾಗ್ಯ ಯೋಜನೆ ಮುಂತಾದ ಕಾರ್ಯಕ್ರಮಗಳು ಶಿಕ್ಷಣವಂತರಾಗಲು ಯೋಜನೆಗಳಾಗಿವೆ ಎಂದರು
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ರವಿಗೌಡಾ ಪಾಟೀಲ, ಜಯಮ್ಮ ಹಿರಳ್ಳಿ, ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗೀಮಠ, ಕಾಂಗೈ ಹಿರಿಯ ಧುರಿಣ ಎಚ್.ಎಮ್.ನಾಯಕ್, ರಾಮಣ್ಣ ಪಾಲೇಕರ, ದೇವು ಪಾಟೀಲ, ಗುಂಜಾವತಿ ಗ್ರಾ.ಪಂ ಅಧ್ಯಕ್ಷ, ಗುತ್ತಿಗೆದಾರ ಸಂಘದ ಅಧ್ಯಕ್ಷ ಕೃಷ್ಣಾ ಹಿರಳ್ಳಿ ಮುಂತಾದವರು ಇದ್ದರು.







