ಎಚ್‌ಐವಿ ಸೋಂಕಿತ ಗರ್ಭಿಣಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮುಚ್ಚಿದ ಬಾಗಿಲು !

ಅದಿಲಾಬಾದ್, ಮಾ. 11: ಎಚ್‌ಐವಿ ಸೋಂಕಿತ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಲು ಇಲ್ಲಿನ ರಾಜೀವ್‌ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸೇರಿದಂತೆ ಎರಡು ಸರ್ಕಾರಿ ಆಸ್ಪತ್ರೆಗಳು ನಿರಾಕರಿಸುವ ಅಂಶ ಬೆಳಕಿಗೆ ಬಂದಿದೆ.
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಸ್ವಯಂಸೇವಾ ಸಂಸ್ಥೆಗಳು ಹಾಗೂ ಮಹಿಳಾ ಸಂಘಟನೆಗಳು ದಿಢೀರ್ ಪ್ರತಿಭಟನೆ ನಡೆಸಿದ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು.
ಬೈನ್ಸಾದ 26 ವರ್ಷದ ಮಹಿಳೆ ಒಂಬತ್ತು ತಿಂಗಳ ತುಂಬು ಗರ್ಭಿಣಿ. ಶನಿವಾರ ಹೆರಿಗೆಗಾಗಿ ದಾಖಲಾಗಲು ಸರ್ಕಾರಿ ಆಸ್ಪತ್ರೆಯ ಕದ ತಟ್ಟಿದಳು. ಆದರೆ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ವೈದ್ಯರು ಆಕೆಯನ್ನು ವಾಪಾಸು ಕಳುಹಿಸಿದರು ಎಂದು ಆಪಾದಿಸಲಾಗಿದೆ. ಆರ್‌ಐಎಂಎಸ್ ಆಸ್ಪತ್ರೆಗೆ ಬಂದಾಗಲೂ ಇದೇ ಪರಿಸ್ಥಿತಿ ಆಕೆಗೆ ಎದುರಾಯಿತು ಎನ್ನಲಾಗಿದೆ.
ಈ ವಿಷಯ ಗಮನಕ್ಕೆ ಬಂದ ತಕ್ಷಣ, ಎಚ್‌ಐವಿ ಸೋಂಕಿತರ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಯೊಂದು ರಿಮ್ಸ್ ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ಆರಂಭಿಸಿತು. ಆ ಬಳಿಕ ವೈದ್ಯರು ಮಹಿಳೆಯನ್ನು ದಾಖಲಿಸಿಕೊಂಡರು ಎನ್ನಲಾಗಿದೆ.





