ನ್ಯಾ. ಕೆ.ಎಂ.ಜೋಸೆಫ್ ಸುಪ್ರೀಂ ಕೋರ್ಟ್ ಗೆ ನೇಮಕವಾಗದಂತೆ ಕೇಂದ್ರ ಸರಕಾರ ಅಡ್ಡಿ : ನ್ಯಾಯಮೂರ್ತಿ ಶಾ

ಹೊಸದಿಲ್ಲಿ, ಮಾ.11: ಉತ್ತರಾಖಂಡ್ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರನ್ನು ಸುಪ್ರೀಂಕೋರ್ಟ್ ನ ನ್ಯಾಯಾಧೀಶರಾಗಿ ನೇಮಕ ಮಾಡುವ ಪ್ರಕ್ರಿಯೆಯನ್ನು ತಡೆಯುವ ಮೂಲಕ ಕೇಂದ್ರ ಸರಕಾರ ಅನ್ಯಾಯ ಮಾಡಿದೆ.ಸಮರ್ಥ ನ್ಯಾಯಾಧೀಶರೊಬ್ಬರ ನೇಮಕಕ್ಕೆ ಅಡ್ಡಿಪಡಿಸಿದೆ ದಿಲ್ಲಿ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎ.ಪಿ.ಶಾ ಆರೋಪಿಸಿದ್ದಾರೆ
ಬಿ.ಜಿ.ವರ್ಗಿಸ್ ಸ್ಮಾರಕ ದತ್ತಿ ಉಪನ್ಯಾಸ ನೀಡಿದ ನ್ಯಾಯಮೂರ್ತಿ ಶಾ ಅವರು ಕೇಂದ್ರ ಸರಕಾರ ನ್ಯಾಯಾಧೀಶರ ನೇಮಕವನ್ನು ತಡೆ ಹಿಡಿಯುವ ಮೂಲಕ ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಕ್ಕೆ ಅಡ್ಡಿಯಾಗಿದೆ ಎಂದರು.
ಸುಪ್ರೀಂಕೋರ್ಟ್ ಗೆ ಸಮರ್ಥ ನ್ಯಾಯಮೂರ್ತಿ ಜೋಸೆಫ್ ಅವರ ನೇಮಕ ಮಾಡಲು ಕೊಲಿಜಿಯಂ(ನ್ಯಾಯಾಧೀಶರ ನೇಮಕಾತಿ ಸಮಿತಿ) ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರಕಾರ ಅವರ ನೇಮಕವನ್ನು ಉದ್ದೇಶಪೂರ್ವಕವಾಗಿ ತಡೆದಿದೆ.
ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಉತ್ತರಾಖಂಡದಲ್ಲಿ ಎಪ್ರಿಲ್ 2016ರಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಕುರಿತು ಕೇಂದ್ರ ಕೈಗೊಂಡ ನಿರ್ಧಾರಕ್ಕೆ ಜಸ್ಟಿಸ್ ಜೋಸೆಫ್ ನೇತೃತ್ವದ ಪೀಠ ತಡೆ ಹೇರಿ ಕೇಂದ್ರ ಸರಕಾರಕ್ಕೆ ಮುಜುಗರವನ್ನುಂಟು ಮಾಡಿದ್ದರು. ಈ ಕಾರಣಕ್ಕಾಗಿ ಕೇಂದ್ರ ಸರಕಾರ ಜಸ್ಟಿಸ್ ಜೋಸೆಫ್ ಅವರನ್ನು ಸುಪ್ರೀಂಕೋರ್ಟ್ ಗೆ ನೇಮಕವನ್ನು ತಡೆ ಹಿಡಿದಿದೆ ಎಂದು ಅವರು ಹೇಳಿದರು.







